ಬೆಳಗಾವಿಯ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾದ ಕಪಿಲೇಶ್ವರನಷ್ಟೇ ಜಾಗೃತವಾಗಿರುವ ವಡಗಾಂವನ ಶ್ರೀ ಮಲ್ಲಿಕಾರ್ಜುನ ಮಂದಿರದಲ್ಲಿ ಮಹಾಶಿವರಾತ್ರಿ ಉತ್ಸವವು ಅತ್ಯಂತ ವೈಭವದಿಂದ ಜರುಗಿತು. ಸತತ ಎಂಟು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಂಗಳವಾರ ಬೃಹತ್ ಮಹಾಪ್ರಸಾದದೊಂದಿಗೆ ತೆರೆಕಂಡವು.


ಬೆಳಗಾವಿ ವಡಗಾಂವನ ಚಾವಡಿ ಗಲ್ಲಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ಮಂದಿರದಲ್ಲಿ ಫೆಬ್ರವರಿ 10 ರಿಂದ 17 ರವರೆಗೆ ಅದ್ಧೂರಿಯಾಗಿ ಶಿವರಾತ್ರಿ ಉತ್ಸವವನ್ನು ಆಯೋಜಿಸಲಾಗಿತ್ತು. ಶ್ರೀ ಗುರುಸಿದ್ಧ ಸ್ವಾಮೀಜಿ ಹಾಗೂ ಮಂಜುನಾಥ ಮೇಗನಾಳ ಅವರಿಂದ ನಡೆದ ಪ್ರವಚನ ಕಾರ್ಯಕ್ರಮಗಳು ಭಕ್ತರ ಮನ ಗೆದ್ದವು. ಶಿವರಾತ್ರಿಯಂದು ವಿಶೇಷ ಪೂಜೆ ಮತ್ತು ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಸೌಹಾರ್ದತೆ ಮತ್ತು ಭಕ್ತಿಯ ಸಂಕೇತವಾಗಿ ಸೋಮವಾರ ನಡೆದ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಉತ್ಸವವು ವಝೇ ಗಲ್ಲಿ, ಚಾವಡಿ ಗಲ್ಲಿ, ಸಫಾರ್ ಗಲ್ಲಿ ಸೇರಿದಂತೆ ವಿವಿಧ ಓಣಿಗಳಲ್ಲಿ ವೈಭವದಿಂದ ಸಂಚರಿಸಿತು. ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ನಡೆದ ಬೃಹತ್ ಮಹಾಪ್ರಸಾದ ವಿತರಣೆಗೆ ಹುಣಸಿಕೊಳ್ಳ ಮಠದ ಶ್ರೀ ಸಿದ್ಧಬಸವ ಮಹಾಸ್ವಾಮೀಜಿಗಳು ಚಾಲನೆ ನೀಡಿದರು. ಸುಮಾರು 20 ಸಾವಿರಕ್ಕೂ ಅಧಿಕ ಭಕ್ತರು ಮಹಾಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.

ಇದೇ ಸಂದರ್ಭದಲ್ಲಿ ಕುರುಹಿನಶೆಟ್ಟಿ ಯುವಕ ಮಂಡಳದ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳು ಹಬ್ಬದ ಕಳೆಯನ್ನು ಹೆಚ್ಚಿಸಿದ್ದವು. ದೇವಸ್ಥಾನದ ಕಾರ್ಯದರ್ಶಿ ಶ್ರೀಧರ ತಿಗಡಿ ಅವರು ಕಾರ್ಯಕ್ರಮದ ಯಶಸ್ಸಿನ ಕುರಿತು ಮಾಹಿತಿ ಹಂಚಿಕೊಂಡರು. ಸ್ಥಳೀಯರ ಸಹಕಾರದೊಂದಿಗೆ ನಡೆದ ಈ ಉತ್ಸವವು ವಡಗಾಂವ ಭಾಗದಲ್ಲಿ ಧಾರ್ಮಿಕ ಜಾಗೃತಿ ಮತ್ತು ಭಕ್ತಿಯ ಹೊಸ ಅಲೆ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಈ ಬೃಹತ್ ಕಾರ್ಯಕ್ರಮದ ಯಶಸ್ಸಿನ ಹಿಂದೆ ಸಮಿತಿಯ ಸದಸ್ಯರ ಅಪಾರ ಶ್ರಮವಿದೆ. ಬಸವರಾಜ್ ಅತ್ತಿಮರಡಿ, ನಿಜಗುಣಿ ಬಸ್ಸಾಪುರೆ, ಮಲ್ಲಿಕಾರ್ಜುನ ಯಳ್ಳೂರ ಸೇರಿದಂತೆ ಹಲವು ಮುಖಂಡರು ಸತತವಾಗಿ ಶ್ರಮಿಸಿ ವ್ಯವಸ್ಥೆಗಳನ್ನು ಸುಗಮಗೊಳಿಸಿದರು.
