BELAGAVI

ಬೆಳಗಾವಿಯ ವೈಭವನಗರದಲ್ಲಿ ನೀರಿನ ಹಾಹಾಕಾರ: ವಾಟರ್‌ಮನ್ ದರ್ಪಕ್ಕೆ ಕಂಗೆಟ್ಟ ಜನ, ಉಗ್ರ ಹೋರಾಟದ ಎಚ್ಚರಿಕೆ

Share

ಬೆಳಗಾವಿಯ ವೈಭವನಗರದ ಸೆಕ್ಟರ್ ನಂ. 2ರಲ್ಲಿರುವ ಶ್ರೀರಾಮ ಕಾಲನಿ ನಿವಾಸಿಗಳು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕುಡಿಯುವ ನೀರು, ರಸ್ತೆ ಮತ್ತು ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಾಲನಿ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಬೆಳಗಾವಿಯ ವೈಭವನಗರದ ಶ್ರೀರಾಮ ಕಾಲನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅತಿಯಾಗಿದ್ದು, ನಿವಾಸಿಗಳು ಹನಿ ನೀರಿಗೂ ಪರದಾಡುವಂತಾಗಿದೆ. ಕಳೆದ 10-11 ದಿನಗಳಿಗೊಮ್ಮೆ ಮಾತ್ರ ಇಲ್ಲಿ ನೀರು ಪೂರೈಕೆಯಾಗುತ್ತಿದ್ದು, ವಾಟರ್‌ಮನ್ ಮಾತ್ರ “ನಮಗೆ ಬೇಕಾದಾಗ ನೀರು ಬಿಡುತ್ತೇವೆ” ಎಂದು ದರ್ಪ ತೋರುತ್ತಿದ್ದಾನೆ ಎಂದು ನಿವಾಸಿಗಳು ದೂರಿದ್ದಾರೆ. ಈ ಬಗ್ಗೆ ಜೆಜೆಎಂ ಅಧಿಕಾರಿಗಳನ್ನು ಕೇಳಿದರೆ ಗುತ್ತಿಗೆದಾರರ ಕಡೆಗೆ ಬೊಟ್ಟು ಮಾಡುತ್ತಾರೆ, ಗುತ್ತಿಗೆದಾರರು ಜೆಜೆಎಂ ಕಡೆಗೆ ಬೆರಳು ತೋರಿಸುತ್ತಿದ್ದಾರೆ. ಅಧಿಕಾರಿಗಳ ಈ ಜವಾಬ್ದಾರಿ ರಹಿತ ನಡವಳಿಕೆಯಿಂದಾಗಿ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಇಂದು ಖಾಲಿ ಕೊಡಗಳನ್ನು ಪ್ರದರ್ಶಿಸಿ ನಿವಾಸಿಗಳು ತಮ್ಮ ಆಕ್ರೋಶ ಹೊರ ಹಾಕಿದರು.
ವೈಷ್ಣವಿ ಮಹಿಳಾ ಮಂಡಳದ ಪ್ರಮುಖರಾದ ಸವಿತಾ ಕಿಲ್ಲೇಕರ ಅವರು ಮಾತನಾಡಿ, “ಕಳೆದ ಹಲವು ವರ್ಷಗಳಿಂದ ಸಮರ್ಪಕ ನೀರು ಪೂರೈಕೆಯಿಲ್ಲದೆ ತತ್ತರಿಸುತ್ತಿದ್ದೇವೆ. ಚರಂಡಿ ನಿರ್ವಹಣೆ ಸರಿಯಿಲ್ಲದ ಕಾರಣ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಬಾವಿಗಳಿಗೂ ಸೇರ್ಪಡೆಯಾಗುತ್ತಿದೆ. ಗ್ರಾಮ ಪಂಚಾಯತ್ ಕಾಮಗಾರಿ ಆರಂಭಿಸಿದೆ ಆದರೆ ಜಾತ್ರೆ ಹತ್ತಿರ ಬರುತ್ತಿದ್ದರೂ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಚರಂಡಿಗಳ ಎತ್ತರ ಹೆಚ್ಚಿಸಿರುವುದರಿಂದ ಓಡಾಡಲು ತೊಂದರೆಯಾಗುತ್ತಿದೆ. ಪಿಡಿಓ ಮತ್ತು ಸಿಇಓ ಅವರಿಗೆ ಕೇಳಿದರೆ ನೀರು ಪೂರೈಸುತ್ತಿದ್ದೇವೆ ಎನ್ನುತ್ತಾರೆ, ಹಾಗಾದರೆ ಆ ನೀರು ಎಲ್ಲಿ ಹೋಗುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.

ಇನ್ನು ಕಾಲನಿಯಲ್ಲಿ ಸರಿಯಾದ ರಸ್ತೆ ಅಭಿವೃದ್ಧಿಯಾಗಿಲ್ಲ ಮತ್ತು ಚರಂಡಿ ನಿರ್ಮಾಣವೂ ವೈಜ್ಞಾನಿಕವಾಗಿಲ್ಲ ಎಂದು ನಿವಾಸಿಗಳು ಕಿಡಿಕಾರಿದ್ದಾರೆ. ಪಿಡಿಓ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಈ ಕುರಿತು ಎಚ್ಚರಿಕೆ ನೀಡಿರುವ ಕಾಲನಿಯ ಪ್ರಮುಖರಾದ ಪ್ರಶಾಂತ್ ಕಿತ್ತೂರು ಅವರು, ಕೂಡಲೇ ನಮ್ಮ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಗ್ರಾಮ ಪಂಚಾಯತ್ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಮೂಲಭೂತ ಸೌಕರ್ಯಗಳ ಕೊರತೆಯಿಂದ ಬೇಸತ್ತಿರುವ ಕಾಲನಿ ನಿವಾಸಿಗಳು ಈಗ ನ್ಯಾಯಕ್ಕಾಗಿ ಬೀದಿಗಿಳಿಯಲು ಸಿದ್ಧರಾಗಿದ್ದಾರೆ.

Tags:

error: Content is protected !!