Vijaypura

ಅಂಗಾಂಗ ದಾನ ಮಾಡಿ ಅಮರರಾದ ಬಲರಾಮ ಕೃಷ್ಣ ಬಾಗಲಕೋಟ್ ಕುಟುಂಬಕ್ಕೆ ಅಭಿನಂದನೆ: BLDE ಸಂಸ್ಥೆಯಿಂದ ಉಚಿತ ಶಿಕ್ಷಣ ನೆರವು – ಉದ್ಯೋಗದ ಭರವಸೆ

Share

ವಿಜಯಪುರದ ಯುವಕ ಬಲರಾಮ ಕೃಷ್ಣ ಬಾಗಲಕೋಟ್ ಅವರು ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾಗಿರುವುದು ಅತ್ಯಂತ ದುಃಖದ ಸಂಗತಿ. ಈ ದುಃಖದ ಕ್ಷಣದಲ್ಲೂ ಸಂಯಮ ಕಳೆದುಕೊಳ್ಳದೆ ಅವರ ಕುಟುಂಬವು ಅಂಗಾಂಗ ದಾನ ಮಾಡಲು ಸಹಮತ ನೀಡಿದ್ದು ಶ್ಲಾಘನೀಯ ಹಾಗೂ ಮಾದರಿ ಕಾರ್ಯವಾಗಿದೆ. ಸಾವಿನ ನಂತರವೂ ಅನೇಕ ಜೀವಗಳಿಗೆ ಬೆಳಕಾಗಿರುವ ಈ ನಿರ್ಧಾರ ಮಾನವೀಯತೆಯ ಉನ್ನತ ಉದಾಹರಣೆ ಎಂದು ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು. ವಿಜಯಪುರ ನಗರದ BLDE ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕುಟುಂಬದ ಮಹತ್ತರ ಸಹಕಾರಕ್ಕೆ ಧನ್ಯವಾದ ಹಾಗೂ ಅಭಿನಂದನೆ ಸಲ್ಲಿಸಲಾಯಿತು. ಕುಟುಂಬದ ಸದಸ್ಯರು ಬಯಸಿದಲ್ಲಿ BLDE ಸಂಸ್ಥೆಯಿಂದ ಉಚಿತ ಶಿಕ್ಷಣಕ್ಕೆ ನೆರವು ಮತ್ತು ಉದ್ಯೋಗದ ಅವಕಾಶವನ್ನು ಒದಗಿಸಲಾಗುವುದು ಎಂಬ ಭರವಸೆ ನೀಡಿದರು. ನಿಧನಾನಂತರ ಅಂಗಾಂಗಗಳು ಮಣ್ಣಿನಲ್ಲಿ ಮಣ್ಣಾಗುವ ಬದಲು, ಅವುಗಳನ್ನು ದಾನಮಾಡಿ ಹಲವರ ಬದುಕಿಗೆ ಆಶಾಕಿರಣವಾಗಿಸುವುದು ಮಹಾಪುಣ್ಯದ ಕಾರ್ಯ. ಇದು ಕೇವಲ ಒಂದು ಘಟನೆ ಆಗಿ ಉಳಿಯದೇ, ಸಮಾಜದಲ್ಲಿ ಒಂದು ಆಂದೋಲನವಾಗಿ ರೂಪುಗೊಳ್ಳಬೇಕು ಎಂದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಕೈಗೊಳ್ಳಬೇಕು. ವಿದೇಶಗಳಲ್ಲಿ ಇರುವಂತೆಯೇ ನಮ್ಮ ದೇಶದಲ್ಲಿಯೂ ಅಂಗಾಂಗ ದಾನದ ಕುರಿತು ವ್ಯಾಪಕ ಅರಿವು ಮೂಡಿಸುವ ಕಾರ್ಯಗಳಾಗಬೇಕು. ಈ ಪವಿತ್ರ ಅಭಿಯಾನ ನನ್ನಿಂದಲೇ ಆರಂಭವಾಗಲು ನನ್ನ ಸಂಪೂರ್ಣ ಸಹಮತವಿದೆ ಎಂದರು‌. ಇದೇ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾನೇ ಸ್ವತಃ ಅಂಗಾಂಗ ದಾನ ಮಾಡಲು ವಾಗ್ದಾನ ಮಾಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಘೋಷಣೆ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಬಲರಾಮ ಕೃಷ್ಣ ಬಾಗಲಕೋಟ್ ಅವರ ಕುಟುಂಬ ಸದಸ್ಯರು, BLDE-DU ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಪ್ರಭಾರಿ ಕುಲಪತಿ ಡಾ. ಅರುಣ ಇನಾಮದಾರ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!