Bagalkot

ಬಾಗಲಕೋಟೆಯಲ್ಲಿ ರೈತರ ಸಾಲದ ಸಂಕಷ್ಟ: ಸಂಸದರ ಕಚೇರಿಗೆ ಮುತ್ತಿಗೆ – ಜಪ್ತಿ ನೋಟಿಸ್‌ಗೆ ಆಕ್ರೋಶ!

Share

ಬಾಗಲಕೋಟೆ ಜಿಲ್ಲೆಯಲ್ಲಿ ಸಾಲದ ಸುಳಿಗೆ ಸಿಲುಕಿದ ರೈತರು ಈಗ ಬ್ಯಾಂಕ್‌ಗಳ ಜಪ್ತಿ ಭೀತಿಯಲ್ಲಿದ್ದಾರೆ. ಮುಧೋಳ ಭಾಗದ ನೂರಾರು ರೈತರು ಇಂದು ಸಂಸದರ ಕಚೇರಿಗೆ ಧಾವಿಸಿದ್ದು, ಬ್ಯಾಂಕ್‌ಗಳ ಕಿರುಕುಳದ ವಿರುದ್ಧ ಗುಡುಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಭಾಗದ ರೈತರು ಇಂದು ಜಿಲ್ಲಾಡಳಿತ ಭವನದಲ್ಲಿರುವ ಸಂಸದ ಪಿ.ಸಿ. ಗದ್ದಿಗೌಡರ ಅವರ ಕಚೇರಿಗೆ ಆಗಮಿಸಿ ತಮ್ಮ ಅಳಲು ತೋಡಿಕೊಂಡರು. ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಮರುಪಾವತಿಸುವಂತೆ ರೈತರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಆಸ್ತಿ ಹರಾಜು ಹಾಕುವ ಮತ್ತು ಜಪ್ತಿ ಮಾಡುವ ನೋಟಿಸ್‌ಗಳನ್ನು ಜಾರಿ ಮಾಡುತ್ತಿವೆ. ಈ ಬೆದರಿಕೆ ತಂತ್ರದಿಂದ ಕಂಗೆಟ್ಟಿರುವ ರೈತರು, ಕೂಡಲೇ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿ ಕಿರುಕುಳ ತಪ್ಪಿಸಬೇಕು ಮತ್ತು ಸಾಲ ಮರುಪಾವತಿಗೆ ‘ಒನ್ ಟೈಮ್ ಸೆಟಲ್ ಮೆಂಟ್’ (OTS) ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.
ರೈತರ ಪ್ರತಿಭಟನೆಯ ತೀವ್ರತೆ ಅರಿತ ಸಂಸದ ಪಿ.ಸಿ. ಗದ್ದಿಗೌಡರ ಅವರು ಸ್ಥಳದಲ್ಲೇ ಜಿಲ್ಲಾ ಪಂಚಾಯತ್ ಸಿಇಒ ಶಶಿಧರ ಕುರೇರ ಮತ್ತು ವಿವಿಧ ಬ್ಯಾಂಕ್‌ಗಳ ಉನ್ನತ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ರೈತರಿಗೆ ಅನಗತ್ಯ ತೊಂದರೆ ನೀಡದಂತೆ ಬ್ಯಾಂಕ್‌ಗಳಿಗೆ ಸೂಚಿಸಿದ ಸಂಸದರು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಆದರೆ, ಒಂದು ವೇಳೆ ಬ್ಯಾಂಕ್‌ಗಳು ತಮ್ಮ ಧೋರಣೆ ಬದಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ರೈತ ಸಂಘಟನೆಗಳು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿವೆ.

Tags:

error: Content is protected !!