ಬೆಳಗಾವಿಯಲ್ಲಿ ನೀರಿಗಾಗಿ ಶ್ರಮಿಸುತ್ತಿರುವ ‘ಪ್ಯಾಸ್ ಫೌಂಡೇಶನ್’ ಇದೀಗ ಮತ್ತೊಂದು ಮಾದರಿ ಕಾರ್ಯ ಮಾಡಿದೆ. ಟೀಚರ್ಸ್ ಕಾಲೋನಿಯ 150 ವರ್ಷಗಳ ಹಳೆಯ ಬಾವಿಯನ್ನು ಪುನರುಜ್ಜೀವನಗೊಳಿಸಿದ ಫೌಂಡೇಶನ್ ತಂಡವನ್ನು ಸ್ಥಳೀಯರು ಆತ್ಮೀಯವಾಗಿ ಸನ್ಮಾನಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಬೆಳಗಾವಿಯ ಟೀಚರ್ಸ್ ಕಾಲೋನಿಯ ದತ್ತ ಮಂದಿರದ ಆವರಣದಲ್ಲಿದ್ದ 150 ವರ್ಷಗಳಷ್ಟು ಹಳೆಯದಾದ, ಸಂಪೂರ್ಣ ಶಿಥಿಲಗೊಂಡಿದ್ದ ಬಾವಿಗೆ ಪ್ಯಾಸ್ ಫೌಂಡೇಶನ್ ಮರುಜೀವ ನೀಡಿದೆ. ಇಲ್ಲಿಯವರೆಗೆ 13 ಕೆರೆಗಳು ಮತ್ತು 4 ಬಾವಿಗಳನ್ನು ಪುನಶ್ಚೇತನಗೊಳಿಸಿರುವ ಈ ಸಂಸ್ಥೆ, ಇದೀಗ ಈ ಬಾವಿಯನ್ನು ಭದ್ರವಾಗಿ ನಿರ್ಮಿಸಿ ಜನರಿಗೆ ಉಪಯುಕ್ತವಾಗುವಂತೆ ಮಾಡಿದೆ. ಈ ಅಪೂರ್ವ ಕಾರ್ಯವನ್ನು ಗುರುತಿಸಿದ ದತ್ತ ಮಂದಿರ ಸೇವಾ ಸಮಿತಿಯವರು, ಫೌಂಡೇಶನ್‌ನ ಅಧ್ಯಕ್ಷ ಡಾ. ಮಾಧವ್ ಪ್ರಭು, ಕಾರ್ಯದರ್ಶಿ ಡಾ. ಪ್ರೀತಿ ಕೋರೆ, ಖಜಾಂಚಿ ಲಕ್ಷ್ಮೀಕಾಂತ್ ಪಸಾರಿ, ಸದಸ್ಯರಾದ ರೋಹನ್ ಕುಲಕರ್ಣಿ ಮತ್ತು ಸೂರ್ಯಕಾಂತ್ ಹಿಂಡಲಗೇಕರ್ ಅವರನ್ನು ಶಾಲ, ಹೂಗುಚ್ಛ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಮಾಧವ್ ಪ್ರಭು ಅವರು ನೀರಿನ ಮಹತ್ವವನ್ನು ವಿವರಿಸಿದರು. ಡಾ. ಪ್ರೀತಿ ಕೋರೆ ಅವರು ಬಾವಿಯ ಪುನಶ್ಚೇತನಕ್ಕೆ ಸಹಕರಿಸಿದ ಎ.ಕೆ.ಪಿ. ಫೆರೋಕಾಸ್ಟ್‌ನ ಪರಾಘ್ ಭಂಡಾರೆ ಮತ್ತು ಪ್ರೀತಿ ಭಂಡಾರೆ ಅವರಿಗೆ ಧನ್ಯವಾದ ಅರ್ಪಿಸಿದರು. ನಂತರ ಪ್ಯಾಸ್ ತಂಡದವರಿಂದ ದತ್ತ ಮಂದಿರದಲ್ಲಿ ಆರತಿ ನೆರವೇರಿತು. ಈ ಸಂದರ್ಭದಲ್ಲಿ ಸೇವಾ ಸಮಿತಿಯ ಕೆ.ಸಿ. ಮೋದಿ, ವೈ.ಎಂ. ಸುಳೆಭಾವಿ, ಎಸ್.ಎಚ್. ಮಧಲೂರ್ ಸೇರಿದಂತೆ ಅನೇಕ ಗಣ್ಯರು ಮತ್ತು ಕಾಲೋನಿಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
