ಸಂಚಾರ ನಿಯಮ ಉಲ್ಲಂಘಿಸಿ ಅಪ್ರಾಪ್ತ ಬಾಲಕನೊಬ್ಬ ಟ್ರಕ್ ಚಾಲನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಟ್ರಕ್ ಚಾಲನೆ ಮಾಡಿದ್ದ ಅಪ್ರಾಪ್ತನಿಗೆ 25 ಸಾವಿರ ರೂ. ದಂಡ ವಿಧಿಸಿ ಟ್ರಕ್ ಅನ್ನು ಬಿಡುಗಡೆಗೊಳಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.

ಬೆಳಗಾವಿಯ ಟಿಳಕವಾಡಿ ಪ್ರದೇಶದಲ್ಲಿ ಅಪ್ರಾಪ್ತ ಬಾಲಕನೊಬ್ಬ ಟ್ರಕ್ ಚಾಲನೆ ಮಾಡುತ್ತಿರುವುದನ್ನು ಗಮನಿಸಿದ ಸಂಚಾರ ಪೊಲೀಸ್ ಬಡಿಗೇರ ಅವರು ತಕ್ಷಣವೇ ಟ್ರಕ್ ಅನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಬೆಳಗಾವಿಯ ಮೂರನೇ ಜೆಎನ್ಎಂಸಿ ನ್ಯಾಯಾಲಯ, ಅಪ್ರಾಪ್ತನಿಗೆ ಟ್ರಕ್ ಚಾಲನೆ ಮಾಡಲು ಅವಕಾಶ ನೀಡಿದ್ದಕ್ಕಾಗಿ 25 ಸಾವಿರ ರೂ. ದಂಡ ವಿಧಿಸಿದೆ.
ಬೆಳಗಾವಿ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಪೊಲೀಸರು ಟ್ರಕ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ದಂಡದ ಮೊತ್ತ ಪಾವತಿಸಿದ ನಂತರ ನ್ಯಾಯಾಲಯವು ಟ್ರಕ್ ಅನ್ನು ಬಿಡುಗಡೆಗೊಳಿಸಲು ಆದೇಶ ನೀಡಿದೆ. ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.
