ಶಿವರಾತ್ರಿ ಎಂದರೇ ಉಪವಾಸವಿದ್ದು ಶಿವನ ಆರಾಧನೆ ಮಾಡುವದು. ಶಿವ ಶಿವ ಶಿವನೆಂದರೆ ಭಯವಿಲ್ಲಾ ಎಂಬಂತೆ ಭಕ್ತಿ ಲೋಕದಲ್ಲಿ ವಿಹರಿಸಿ ಶ್ರದ್ಧೆಯಿಂದ ಭಕ್ತಿಯಲ್ಲಿ ಮಿಂದೆಳುವದು ಸಾಮಾನ್ಯ. ಆದ್ರೆ ಇಲ್ಲೊಂದು ದೇವಸ್ಥಾನದಲ್ಲಿ ರಕ್ತದಾನ, ಆರೋಗ್ಯ ಶಿಬಿರಗಳನ್ನು ನಡೆಸಲಾಯಿತು. ಇನ್ನೂ ಭಕ್ತರು ಕೂಡಾ ಉಪವಾಸವಿದ್ದರೂ ರಕ್ತದಾನ ಮಾಡುವ ಮೂಲಕ ಸಾಮಾಜಿಕ ಸೇವೆ, ಮತ್ತೊಬ್ಬರ ಪ್ರಾಣ ರಕ್ಷಣೆಗೆ ಸೈ ಎನಿಸಿಕೊಂಡರು. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಮಹಾಶಿವರಾತ್ರಿಯ ಅಂಗವಾಗಿ ವಿಜಯಪುರ ನಗರದ ಉಕ್ಕಲಿ ರಸ್ತೆಯ ಶಿವಗಿರಿಯಲ್ಲಿರುವ 85 ಅಡಿ ಎತ್ತರದ ಭವ್ಯ ಶಿವಮೂರ್ತಿಯ ಸನ್ನಿಧಿಯಲ್ಲಿ ಭಕ್ತಿ ಮತ್ತು ಸೇವೆಯ ಸಮ್ಮಿಲನ ಕಂಡುಬಂತು. ರಾಜ್ಯದಲ್ಲೇ ಎರಡನೇ ಅತಿ ಎತ್ತರದ ಶಿವನ ವಿಗ್ರಹವೆಂದು ಹೆಸರಾಗಿರುವ ಈ ಪವಿತ್ರ ತಾಣದಲ್ಲಿ ನಸುಕಿನ ಜಾವ 4 ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಿ, ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಪುನೀತರಾದರು. 1500 ಟನ್ ತೂಕ, 150 ಅಡಿ ಅಗಲ ಹೊಂದಿರುವ ಶಿವಮೂರ್ತಿ ಕೇವಲ ಧಾರ್ಮಿಕ ಕೇಂದ್ರವಷ್ಟೇ ಅಲ್ಲ, ವಿಜಯಪುರದ ಪ್ರೇಕ್ಷಣೀಯ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ. ಸ್ಥಾಪನೆಯಾಗಿ 20 ವರ್ಷಗಳನ್ನು ಪೂರೈಸಿರುವ ಈ ಕ್ಷೇತ್ರ ದಿನದಿಂದ ದಿನಕ್ಕೆ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದ್ದು, ಈಗ ಪ್ರಮುಖ ಪ್ರವಾಸಿ ಕೇಂದ್ರವಾಗಿಯೂ ರೂಪುಗೊಂಡಿದೆ. ಇನ್ನೂ ಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕ, ಮಹಾಭಿಷೇಕ, ಪುಷ್ಪಾರ್ಚನೆ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜಾ ಪುನಸ್ಕಾರಗಳು ನಡೆದವು. ಸಂಜೆ ಉಡಿ ತುಂಬುವ ಕಾರ್ಯಕ್ರಮದ ಜೊತೆಗೆ ಮಹಿಳೆಯರೇ ತೇರನ್ನು ಎಳೆಯುವ ವಿಶಿಷ್ಟ ಸಂಪ್ರದಾಯ ಎಲ್ಲರ ಗಮನ ಸೆಳೆಯಿತು.
ಇನ್ನೂ ಧಾರ್ಮಿಕ ಭಾವನೆಯನ್ನು ಮತ್ತಷ್ಟು ಗಾಢಗೊಳಿಸುವಂತೆ ಗವಿ ಶಿವಲಿಂಗ, ಸುಂದರೇಶ್ವರ ದೇಗುಲ, ಲಿಂಗದ ಗುಡಿ ಸೇರಿದಂತೆ ನಗರದ ವಿವಿಧ ಶಿವಾಲಯಗಳಲ್ಲೂ ಭಕ್ತರು ಶಿವನಾಮ ಸ್ಮರಣೆಗೈದು ದರ್ಶನ ಪಡೆದರು. ಈ ಬಾರಿ ಮಹಾಶಿವರಾತ್ರಿಯ ವಿಶೇಷತೆ ಎಂದರೆ ಉಪವಾಸದೊಂದಿಗೆ ರಕ್ತದಾನ ಕಾರ್ಯಕ್ರಮ ಕೂಡ ನಡೆಯಿತು. ಭಕ್ತರು ಭಗವಂತನ ಆರಾಧನೆಯ ಜೊತೆಗೆ ಮಾನವ ಸೇವೆಯನ್ನೂ ಪರಮ ಧರ್ಮವೆಂದು ಕಂಡು ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿದರು. ಶಿವಸೇವೆಯೇ ಜೀವಸೇವೆ ಎಂಬ ಸಂದೇಶವನ್ನು ಸಾರಿದ ಈ ಕಾರ್ಯಕ್ಕೆ ಸಮಾಜದ ಎಲ್ಲ ವಲಯಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಆಯೋಜಿಸಲಾದ ಆರೋಗ್ಯ ತಪಾಸಣೆ ಶಿಬಿರದಲ್ಲಿ ನೂರಾರು ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಆರೋಗ್ಯ ಪರಿಶೀಲನೆ ಮಾಡಿಸಿಕೊಂಡರು. ರಕ್ತದೊತ್ತಡ, ಮಧುಮೇಹ ಪರೀಕ್ಷೆ ಸೇರಿದಂತೆ ಮೂಲಭೂತ ಆರೋಗ್ಯ ತಪಾಸಣೆಗಳನ್ನು ನಡೆಸಿ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಯಿತು. ಉಪವಾಸದ ಪವಿತ್ರತೆಯೊಂದಿಗೆ ದೇಹ-ಮನ-ಆರೋಗ್ಯ ಕಾಪಾಡುವ ಮಹತ್ವವನ್ನು ಸಾರುವ ಸುಂದರ ರೂಪಕವಾಗಿ ಈ ಕಾರ್ಯಕ್ರಮಗಳು ನಡೆದವು.
ಒಟ್ನಲ್ಲಿ ಭಕ್ತಿ, ಶ್ರದ್ಧೆ, ಸೇವಾ ಮನೋಭಾವ ಈ ಮೂರು ಮೌಲ್ಯಗಳ ಸಮನ್ವಯದಿಂದ ಶಿವಗಿರಿ ಈ ಮಹಾಶಿವರಾತ್ರಿಯಲ್ಲಿ ಮತ್ತೊಮ್ಮೆ ಧಾರ್ಮಿಕ ಹಾಗೂ ಸಾಮಾಜಿಕ ಚೈತನ್ಯದ ಕೇಂದ್ರವಾಗಿ ಮೆರೆದಿದೆ. ಭಕ್ತರ ಶಿಸ್ತುಬದ್ಧ ದರ್ಶನ ವ್ಯವಸ್ಥೆ, ಸೇವಾ ಕಾರ್ಯಕ್ರಮಗಳ ಯಶಸ್ವಿ ಆಯೋಜನೆ ಮತ್ತು ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಶಿವರಾತ್ರಿಯ ಆಚರಣೆಗೆ ವಿಶೇಷ ಮೆರುಗು ನೀಡಿತು. ಭಕ್ತಿ ಮತ್ತು ಸೇವೆ ಒಂದೇ ನಾಣ್ಯದ ಎರಡು ಮುಖಗಳೆಂಬ ಸಂದೇಶವನ್ನು ವಿಜಯಪುರದ ಶಿವಗಿರಿ ಮತ್ತೊಮ್ಮೆ ಜಗತ್ತಿಗೆ ಸಾರುವಲ್ಲಿ ಯಶಸ್ವಿಯಾಯಿತು.
