• ಖಾನಾಪುರಕ್ಕೆ ಹರಿದಿದೆ ₹500 ಕೋಟಿ ಗ್ಯಾರಂಟಿ
• ಬಡವರ ಸಬಲೀಕರಣವೇ ಕಾಂಗ್ರೆಸ್ ಸರ್ಕಾರದ ನೀತಿ
• ವಿರೋಧ ಪಕ್ಷಗಳ ಸುಳ್ಳು ಆರೋಪಕ್ಕೆ ಉತ್ತರ
• ಡಾ. ಅಂಜಲಿ ನಿಂಬಾಳ್ಕರ್ ಅವರಿಂದ ಮಾಹಿತಿ

ರಾಜ್ಯದ ಬಡವರು, ಶ್ರಮಜೀವಿಗಳು ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಇಂದು ಕ್ರಾಂತಿಕಾರಿ ಬದಲಾವಣೆ ತರುತ್ತಿವೆ. ಕೇವಲ ರಾಜ್ಯಮಟ್ಟದಲ್ಲಿ ಅಷ್ಟೇ ಅಲ್ಲದೆ, ಖಾನಾಪುರ ತಾಲೂಕಿನ ಪ್ರತಿ ಮನೆಮನೆಗೂ ಈ ಯೋಜನೆಗಳ ಲಾಭ ತಲುಪಿದೆ. ಈ ಬಗ್ಗೆ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರು ನೀಡಿರುವ ಮಹತ್ವದ ಅಂಕಿ-ಅಂಶಗಳ ವರದಿ ನೀಡಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯಾದ್ಯಂತ ₹1.16 ಲಕ್ಷ ಕೋಟಿ ಖರ್ಚು ಮಾಡಿದ್ದು, ದೇಶದ ಅತಿದೊಡ್ಡ ಕಲ್ಯಾಣ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಖಾನಾಪುರ ತಾಲೂಕಿನ ಮಟ್ಟಿಗೆ ಹೇಳುವುದಾದರೆ, ಪ್ರತಿ ತಿಂಗಳು ಸುಮಾರು ₹20 ಕೋಟಿ ರೂಪಾಯಿಗಳು ಈ ಯೋಜನೆಗಳ ಮೂಲಕ ತಾಲೂಕಿನ ಜನರಿಗೆ ತಲುಪುತ್ತಿದೆ. ಕಳೆದ 26-27 ತಿಂಗಳುಗಳಲ್ಲಿ ಕಾಂಗ್ರೆಸ್ ಸರ್ಕಾರವು ಖಾನಾಪುರ ತಾಲೂಕೊಂದಕ್ಕೇ ಸುಮಾರು ₹500 ಕೋಟಿ ರೂಪಾಯಿಗಳನ್ನು ನೇರವಾಗಿ ಜನರ ಖಾತೆಗೆ ತಲುಪಿಸಿದೆ ಎಂದು ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಿದರು.
ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಸರ್ಕಾರ ಹಣ ನೀಡುತ್ತಿಲ್ಲ ಎನ್ನುವ ಆರೋಪ ಸಂಪೂರ್ಣ ಸುಳ್ಳು. ತಾಲೂಕಿನ ಬಡವರಿಗೆ ಈವರೆಗೆ ₹500 ಕೋಟಿ ಲಭಿಸಿದೆ, ಇದು ಅಭಿವೃದ್ಧಿ ಅನುದಾನಕ್ಕಿಂತ ಹೊರತಾದ ಮೊತ್ತ” ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ನೀತಿ ಬಡವರು, ರೈತರು ಮತ್ತು ಮಹಿಳೆಯರ ಸಬಲೀಕರಣವನ್ನು ಆಧರಿಸಿದ್ದರೆ, ಮೋದಿ ಸರ್ಕಾರದ ನೀತಿ ಅದಾನಿ-ಅಂಬಾನಿಯಂತಹ ಉದ್ಯಮಿಗಳ ಸಾಲ ಮನ್ನಾ ಮಾಡುವ ಕಡೆಗೆ ವಾಲಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಎಂದರೆ ಸಾಮಾನ್ಯ ಜನರ ನ್ಯಾಯ ಮತ್ತು ಹಕ್ಕುಗಳಿಗಾಗಿ ಹೋರಾಡುವ ಸರ್ಕಾರ ಎಂಬುದನ್ನು ಜನತೆ ನೆನಪಿನಲ್ಲಿಡಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

