ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಆವರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ೬೬ನೇ ಜನ್ಮದಿನದ ಅಂಗವಾಗಿ ಅಖಿಲ ಭಾರತೀಯ ಎ-ಗ್ರೇಡ್ ಪುರುಷರ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ನಾಳೆ (ರವಿವಾರ) ಸಂಜೆ ಉದ್ಘಾಟನಾ ಸಮಾರಂಭ ನೆರವೇರಲಿದೆ.

ಪಂದ್ಯಾವಳಿಯನ್ನು ಅವರ ಸುಪುತ್ರ ಚಿದಾನಂದ ಸವದಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಐನಾಪುರದ ಕಬ್ಬಡ್ಡಿ ಅಭಿಮಾನಿಗಳು ಅನೇಕ ವರ್ಷಗಳಿಂದ ಉನ್ನತ ಮಟ್ಟದ ಪಂದ್ಯಾವಳಿ ಆಯೋಜಿಸುವಂತೆ ಮನವಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಬಾರಿ ಎ-ಗ್ರೇಡ್ ಪುರುಷರ ಕಬ್ಬಡ್ಡಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಶನಿವಾರ ಮಧ್ಯಾಹ್ನ ಕ್ರೀಡಾಂಗಣದ ಸಿದ್ಧತೆಗಳನ್ನು ಪರಿಶೀಲಿಸಲು ಕಾಂಗ್ರೆಸ್ ಯುವ ನಾಯಕ ಚಿದಾನಂದ ಸವದಿ, ಐನಾಪುರ ಪಟ್ಟಣ ಪಂಚಾಯಿತಿ ಸದಸ್ಯ ಪ್ರವೀಣ್ ಗಾಣಿಗೇರ್, ನ್ಯಾಯವಾದಿ ಸಂಜಯ್ ಕುಚನೂರೆ, ಸಂಜಯ್ ಬಿರಡಿ ಸೇರಿದಂತೆ ಕಾರ್ಯಕರ್ತರು ಭೇಟಿ ನೀಡಿ, ಪಂದ್ಯಾವಳಿ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.

ಅಖಿಲ ಭಾರತೀಯ ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್, ಕರ್ನಾಟಕ ರಾಜ್ಯ ಅಮೆಚೂರ್ ಕಬ್ಬಡ್ಡಿ ಸಂಘಟನೆ ಹಾಗೂ ಬೆಳಗಾವಿ ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಸಂಘಟನೆಯ ಮಾರ್ಗದರ್ಶನದಲ್ಲಿ ಸ್ಪರ್ಧೆಗಳು ನಡೆಯಲಿವೆ. ದೇಶದ ಹೆಸರಾಂತ ತಂಡಗಳಾದ ರಾಜಸ್ಥಾನ್, ಮುಂಬೈ, ಹೊಸ ದೆಹಲಿ, ಗುಜರಾತ್, ಎಸ್‌ಎಸ್ ಹರಿಯಾಣಾ, ರಾಜಸ್ಥಾನ್ ಬುಲ್, ಬೆಂಗಳೂರು ಎಚ್‌ಎಂಟಿ, ಗೋವಾ, ಮಹಾರಾಷ್ಟ್ರ ಪೊಲೀಸ್ ಸೇರಿದಂತೆ ಸುಮಾರು ೩೦ ತಂಡಗಳು ಭಾಗವಹಿಸಲಿವೆ.
ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರೂ. ೧,೦೦,೦೦೦, ದ್ವಿತೀಯ ರೂ. ೭೫,೦೦೦, ತೃತೀಯ ರೂ. ೫೦,೦೦೦ ಹಾಗೂ ಚತುರ್ಥ ರೂ. ೨೫,೦೦೦ ನಿಗದಿಪಡಿಸಲಾಗಿದೆ.
ಸುಮಾರು ೧೦,೦೦೦ ಕ್ಕೂ ಹೆಚ್ಚು ಕಬ್ಬಡ್ಡಿ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ವೀಕ್ಷಕರಿಗಾಗಿ ವಿಶೇಷ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ ಎಂದು ನ್ಯಾಯವಾದಿ ಸಂಜಯ್ ಕುಚನೂರೆ ಹಾಗೂ ಸಂಜಯ್ ಬಿರಡಿ ತಿಳಿಸಿದ್ದಾರೆ.
ಕ್ರೀಡಾಂಗಣ ವೀಕ್ಷಣೆ ವೇಳೆ ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರವೀಣ್ ಗಾಣಿಗೇರ್, ಅಶೋಕ್ ಅಪರಾಜ, ಗುಂಡು ಖವಟಕೋಪ್, ಸಂತೋಷ ಪಾಟೀಲ್, ಪ್ರಕಾಶ್ ಚಿನಗಿ, ಪ್ರಕಾಶ್ ಗಾಣಿಗೇರ್, ದಾದಾ ಜಂತೆನ್ನವರ್, ಸುದರ್ಶನ್ ಜಂತೆನ್ನವರ್, ಬಾಹುಬಲಿ ಕುಸುನಾಳೆ, ಸುಭಾಷ್ ಕುಸುನಾಳೆ, ಸಚಿನ್ ಚೌಗುಲೆ, ಸುರೇಶ್ ವಾಗಮೊಡೆ ಸೇರಿದಂತೆ ಅನೇಕ ಕಬ್ಬಡ್ಡಿ ಅಭಿಮಾನಿಗಳು ಉಪಸ್ಥಿತರಿದ್ದರು.
