ಬೆಳಗಾವಿಯ ಜಿಲ್ಲಾ ಪೊಲೀಸ್ ಕೇಂದ್ರಸ್ಥಾನದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಜಾತ್ರಾ ಸಂಭ್ರಮ ಮನೆಮಾಡಿದೆ. ಇಂದಿನಿಂದ ಮೂರು ದಿನಗಳ ಕಾಲ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವ ಮೇಳೈಸಲಿದ್ದು, ವಿವಿಧ ಕಾರ್ಯಕ್ರಮಗಳಿಗೆ ಶ್ರೀ ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮಿಜೀಗಳು ಚಾಲನೆಯನ್ನು ನೀಡಿದರು.


ಬೆಳಗಾವಿಯ ಪೊಲೀಸ್ ಹೆಡ್ಕ್ವಾರ್ಟರ್ಸ್ನಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಇಂದು ಶನಿವಾರದಂದು ಅದ್ದೂರಿಯಾಗಿ ಆರಂಭಗೊಂಡಿದೆ. ಇಂದು ಮುಂಜಾನೆ 11 ಗಂಟೆಗೆ ನಾಗನೂರು ರುದ್ರಾಕ್ಷಿಮಠದ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಜಾತ್ರೆಗೆ ಅಧಿಕೃತ ಚಾಲನೆ ನೀಡಿದ್ದಾರೆ. ಫೆಬ್ರವರಿ 14 ರಿಂದ 16 ರವರೆಗೆ ನಡೆಯಲಿರುವ ಈ ಉತ್ಸವವು ವಿಶ್ವವಸು ನಾಮ ಸಂವತ್ಸರದ ವಿಶೇಷ ಪುಣ್ಯಕಾಲದಲ್ಲಿ ಜರುಗುತ್ತಿದ್ದು, ಜಿಲ್ಲೆಯ ಪೊಲೀಸ್ ಸಿಬ್ಬಂದಿ ಹಾಗೂ ಭಕ್ತ ಸಮೂಹ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ನಾಗನೂರು ರುದ್ರಾಕ್ಷಿಮಠದ ಶ್ರೀ ಗುರುಸಿದ್ಧ ಸ್ವಾಮಿಜೀಗಳು, ಜಾತ್ರಾ ಮಹೋತ್ಸವದ ನಿಮಿತ್ಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಹಲವಾರು ಭಾಷೆ ಸಂಸ್ಕೃತಿಯನ್ನು ಭಾರತ ದೇಶ ದರ್ಶಿಸುತ್ತದೆ. ಇದು ಅತ್ಯಂತ ಅಭಿಮಾನದ ಸಂಗತಿ. ನಮ್ಮ ಹಿರಿಯರ ತ್ಯಾಗ ಬಲಿದಾನದ ಪ್ರತೀಕವಾದ ನಮ್ಮ ದೇಶವಾಗಿದೆ. ಜೀವನ ಮುಗಿಸಿ ಅಂತ್ಯಯಾತ್ರೆಯಲ್ಲಿರುವ ಮಾನವ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ನಾವು ತೆಗೆದುಕೊಂಡು ಹೋಗುವುದು ಕೇವಲ ನಮ್ಮ ಹೆಸರು ಮಾತ್ರ. ಆದ್ದರಿಂದ ಜನರ ಮನಸ್ಸಿನಲ್ಲಿ ಅಚ್ಚಳಿಯುವಂತಹ ಒಳ್ಳೆಯ ಸತ್ಕಾರ್ಯಗಳನ್ನು ಮಾಡಬೇಕೆಂದು ಕರೆ ನೀಡಿದರು.
ಜಾತ್ರೆಯ ಪ್ರಮುಖ ಆಕರ್ಷಣೆಯಾದ ರಥೋತ್ಸವ ಮತ್ತು ಪಲ್ಲಕ್ಕಿ ಮೆರವಣಿಗೆ ನಾಳೆ ಫೆಬ್ರವರಿ 15ರ ಶಿವರಾತ್ರಿಯಂದು ಜರುಗಲಿದೆ. ಮುಂಜಾನೆ ರುದ್ರಾಭಿಷೇಕದ ನಂತರ ಪಲ್ಲಕ್ಕಿ ಮಹೋತ್ಸವವು ಕಪಿಲೇಶ್ವರ ಮಂದಿರಕ್ಕೆ ತೆರಳಿ ಮರಳಿ ಬರಲಿದೆ. ಸಂಜೆ 5 ಗಂಟೆಗೆ ಮಂದಿರದಿಂದ ಹೊರಡಲಿರುವ ರಥೋತ್ಸವವು ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಹಳೆಯ ಪಿ.ಬಿ. ರಸ್ತೆ ಮೂಲಕ ಸಾಗಿ ಮತ್ತೆ ಮಂದಿರಕ್ಕೆ ತಲುಪಲಿದೆ. ಶಿಸ್ತಿನ ಸಿಪಾಯಿಗಳ ನಾಡಿನಲ್ಲಿ ಭಕ್ತಿಭಾವದ ಅಲೆ ಎದ್ದಿದ್ದು, ದೇವಸ್ಥಾನದ ಆವರಣ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
