ಬಾಗಲಕೋಟೆಯ ಕಲಾದಗಿ ಸಮೀಪ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಆಟೋಗೆ ಹಿಂಬದಿಯಿಂದ ವೇಗವಾಗಿ ಬಂದ ಬೊಲೆರೋ ಕಾರ್ ಡಿಕ್ಕಿ ಹೊಡೆದಿದ್ದು, ಆಟೋದಲ್ಲಿದ್ದ ಐದಾರು ಮಂದಿ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ನಂತರ ಪರಾರಿಯಾಗಲು ಯತ್ನಿಸಿದ ಕಾರು ಚಾಲಕನಿಗೆ ಸಾರ್ವಜನಿಕರು ಸರಿಯಾಗಿಯೇ ಧರ್ಮದೇಟು ನೀಡಿದ್ದಾರೆ.


ಕಲಾದಗಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಆಟೋಗೆ ಅತೀ ವೇಗವಾಗಿ ಬಂದ ಬೊಲೆರೋ ಕಾರು ಹಿಂಬದಿಯಿಂದ ಜೋರಾಗಿ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಆಟೋ ಪಲ್ಟಿಯಾಗುವ ಹಂತಕ್ಕೆ ತಲುಪಿತ್ತಾದರೂ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆಟೋದಲ್ಲಿ ಶಾಲಾ ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

ಅಪಘಾತ ಸಂಭವಿಸುತ್ತಿದ್ದಂತೆಯೇ ಬೊಲೆರೋ ಚಾಲಕ ಸ್ಥಳದಿಂದ ಕಾರು ಸಮೇತ ಪರಾರಿಯಾಗಲು ಯತ್ನಿಸಿದ. ತಕ್ಷಣ ಎಚ್ಚೆತ್ತ ಸ್ಥಳೀಯರು ಕಾರನ್ನು ಬೆನ್ನಟ್ಟಿ ಚಾಲಕನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಾರ್ವಜನಿಕರ ಆಕ್ರೋಶಕ್ಕೆ ಸಿಲುಕಿದ ಚಾಲಕನಿಗೆ ಗೂಸ ಬಿದ್ದಿದ್ದು, ತಪ್ಪು ಒಪ್ಪಿಕೊಂಡು ಕ್ಷಮಿಸುವಂತೆ ಚಾಲಕ ಬೇಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
