Dharwad

ಜಿಲ್ಲೆಯ ಅಭಿವೃದ್ಧಿ, ಗೌರವ ಹೆಚ್ಚಿಸಲು ಕೂಡಿ ಕೆಲಸ ಮಾಡೋಣ

Share

ರಾಜ್ಯದಲ್ಲಿ ಧಾರವಾಡ ಜಿಲ್ಲೆಗೆ ವಿಶೇಷವಾದ ಸ್ಥಾನ ಹಾಗೂ ಗುರುತಿಸುವಿಕೆ ಇದೆ. ಇಲ್ಲಿನ ಸಾಹಿತ್ಯ, ಸಂಗೀತ, ಶಿಕ್ಷಣ ಮತ್ತು ಚಿತ್ರಕಲೆಗಳು ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಗಳಿಸಿವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯ ಮೂಲಕ ಜಿಲ್ಲೆಯ ಗೌರವ ಹೆಚ್ಚಿಸಲು ಎಲ್ಲ ಸರ್ಕಾರಿ ನೌಕರರು ಕೂಡಿ ಕೆಲಸ ಮಾಡೋಣ. ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಮಯಪಾಲನೆಗೆ ಆದ್ಯತೆ ನೀಡಬೇಕು ಎಂದು ಧಾರವಾಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಪರಿಚಯಾತ್ಮಕ ಸಭೆ ಜರುಗಿಸಿ, ಇಲಾಖೆಗಳ ಮಾಹಿತಿ ಪಡೆದು, ಮಾತನಾಡಿದ ಅವರು, ಸರ್ಕಾರಿ ಕರ್ತವ್ಯ ನಿರ್ವಹಿಸುವಲ್ಲಿ ನಮ್ಮ ವೈಯಕ್ತಿಕ ಕಾರಣಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ನಾಗರಿಕರ ಬೇಡಿಕೆ, ಸಮಸ್ಯೆಗಳ ಕುರಿತು ಕ್ಷೇತ್ರ ಮಟ್ಟದಲ್ಲಿ, ತಾಲೂಕಾಮಟ್ಟದಲ್ಲಿ ಆಲಿಸಿ, ತಮ್ಮ ಹಂತದಲ್ಲಿ ಸಾಧ್ಯವಾದರೆ, ಅಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು. ಯಾವುದೇ ವ್ಯಕ್ತಿಗಳನ್ನು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡಿಸಬಾರದು. ಸರ್ಕಾರವು ಅನೇಕ ಇಲಾಖೆಗಳ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜನರ ಮನೆಬಾಗಲಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ ಎಂದು ಅವರು ಹೇಳಿದರು. ಜತೆಗೆ ಜನಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಮತ್ತು ಸಮಯೋಚಿತವಾಗಿ ಸಾರ್ವಜನಿಕರಿಗೆ ತಲುಪಿಸಲು ರಾಜ್ಯ ಸರ್ಕಾರವು ತಾಂತ್ರಿಕವಾಗಿ ಸಾಕಷ್ಟು ಅವಕಾಶಗಳನ್ನು ನೀಡಿದೆ. ಅದಾಗ್ಯೂ ಸಾರ್ವಜನಿಕರಿಗೆ ಸರ್ಕಾರಿ ಸೇವೆ ನೀಡುವಲ್ಲಿ ಅನಗತ್ಯವಾಗಿ ವಿಳಂಬ, ಉದಾಸೀನತೆ ಮತ್ತು ಕರ್ತವ್ಯ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಇಂತಹ ದೂರುಗಳು ಬಂದಲ್ಲಿ, ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿ, ಕ್ರಮಕೈಗೊಳ್ಳಲಿದೆ. ಯಾವುದೇ ಅಧಿಕಾರಿ, ಸಿಬ್ಬಂದಿಗಳಿಗೆ ತಮ್ಮ ವೃತ್ತಿ ನಿರ್ವಹಿಸುವಲ್ಲಿ ಉಂಟಾಗುವ ಅನಾನುಕೂಲತೆ, ಸಮಸ್ಯೆಗಳು ಇದ್ದಲ್ಲಿ, ಅಥವಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಲಹೆ ಸೂಚನೆಗಳಿದ್ದಲ್ಲಿ ನನ್ನೊಂದಿಗೆ ಹಂಚಿಕೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿ ಮುಕ್ತವಾಗಿದೆ. ಎಲ್ಲರೂ ತಮ್ಮ ಜವಾಬ್ದಾರಿ ಹಾಗೂ ಹೋಣೆಗಾರಿಕೆಗಳನ್ನು ಅರಿತು ನಿಯಮಾನುಸಾರ ಕರ್ತವ್ಯ ನಿರ್ವಹಿಸಬೇಕೆಂದು ನೂತನ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಸೂಚಿಸಿದರು.

Tags:

error: Content is protected !!