ನಾಳೆ ಜಗದೊಡೆಯ ಶಿವನ ಆರಾಧಿಸುವ ಶಿವರಾತ್ರಿ ಆಚರಿಸಲಾಗುತ್ತದೆ. ವಿಜಯಪುರ ನಗರದ ಶಿವಗಿರಿಯಲ್ಲಿ ಶಿವರಾತ್ರಿಯ ಸಂಭ್ರಮ ಇಮ್ಮಡಿಗೊಳಿಸಲು ಶಿವಗಿರಿಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವಿಜಯಪುರ ನಗರದಲ್ಲಿ ಮಂದಸ್ಮಿತನಾಗ ಕುಳಿತಿರುವ ಶಿವನ 85 ಅಡಿ ಎತ್ತರದ ಮೂರ್ತಿ ಹೊಂದಿರುವ ಶಿವಗಿರಿಯಲ್ಲಿ ಪ್ರತಿ ವರ್ಷ ಶಿವರಾತ್ರಿಯನ್ನು ಸಂಭ್ರಮ,ಸಡಗರ, ಭಕ್ತಿ, ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಈ ಬಾರಿ ಶಿವರಗಿಗೆ 20 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಈ ಬಾರಿ ಶಿವಗಿರಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲು ಶಿವಗಿರಿಯ ಟಿ.ಕೆ.ಪಾಟೀಲ ಚಾರಿಟಬಲ್ ಟ್ರಸ್ಟ್ ನಿರ್ಧರಿಸಿದೆ.

ನಾಳೆ ಶಿವಗಿರಿಯಲ್ಲಿ ವಿವಿಧ ರೀತಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಭಕ್ತರನ್ನು ಮನರಂಜಿಸಿ ಭಕ್ತಿ ಲೋಕದಲ್ಲಿ ಸಂಚರಿಸುವಂತೆ ಮಾಡಲು ತಯಾರಿ ಭರ್ಜರಿಯಾಗಿ ನಡೆಯುತ್ತಿವೆ. ದಿ.15 ರಂದು ಶಿವರಾತ್ರಿಯ ಪ್ರಯುಕ್ತ ನಸುಕಿನ ಜಾವ 4.30 ಕ್ಕೆ ವಿಶೇಷ ಹೋಮ ಹವನ, ಶಿವರಾತ್ರಿಯ ನಸುಕಿನ ಜಾವ 4.30ಕ್ಕೆ ಶಿವನಿಗೆ ರುದ್ರಾಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಪಂಚ ಕಳಸಾರ್ಚನೆ ಬಳಿಕ ಪ್ರತಿ ತಾಸಿಗೊಮ್ಮೆ ಪೂಜೆ ನಡೆಯಲಿದೆ. ಇದು ಅಹೋರಾತ್ರಿ ನೆರವೇರಲಿದೆ. ಬೆಳಿಗ್ಗೆ 6.30 ಕ್ಕೆ ಮಂಗಳ ವಾದ್ಯಗಳೊಂದಿಗೆ ಶಹನಾಯಿ ಕಾರ್ಯಕ್ರಮ, 8.30 ಕ್ಕೆ ಜಾತ್ರಾ ಉತ್ಸವದ ಧ್ವಜಾರೋಹಣ, 9.00 ಕ್ಕೆ ಅಮ್ಮನವರ ಪೂಜೆ ನಡೆಯಲಿದೆ. ಮಧ್ಯಾಹ್ನ 3.30 ಕ್ಕೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಸಂಜೆ 4.30ಕ್ಕೆ ಪಂಚಲೋಹದ ಬಂಗಾರ ಲೇಪಿತ 23 ಅಡಿ ಎತ್ತರದ ರಥದಲ್ಲಿ ಶಿವನ ಬೆಳ್ಳಿ ಮೂರ್ತಿಯನ್ನು ಪ್ರತಿಷ್ಠಾಪನೆ ನಡೆಯಲಿದೆ. ವಿಶೇಷ ಎಂದರೆ ವಿಜಯಪುರದ ಮುತ್ತೈದೆಯರು ರಥದ ಹಗ್ಗ ಎಳೆದರೆ, ಇನ್ನೊಂದೆಡೆ ಸೊಸೆಯರು ಹಗ್ಗ ಎಳೆಯಲಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ವಿಶಿಷ್ಠವಾದ ಮಹಿಳೆಯರೇ ಥೇರು ಎಳೆಯುವ ಕಾರ್ಯಕ್ರಮ ಇದಾಗಿದೆ. ಇನ್ನೂ ಭಕ್ತರನ್ನು ಭಕ್ತಿಯ ಲೋಕದಲ್ಲಿ ತೇಲಾಡಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಶಿವಗರಿಯ ಮುಖ್ಯಸ್ಥರು ತಿಳಿಸಿದ್ದಾರೆ.

