ಡಿಸಿಸಿ ಬ್ಯಾಂಕ್ ಮೂಲತಃ ರೈತರ ಬ್ಯಾಂಕ್ ಆಗಿದೆ. ನಷ್ಟವಾದರೂ ಸಹ ರೈತರಿಗೆ ಸಾಲ ನೀಡಲೇಬೇಕು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಇಂದು ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿದರು. ಡಿಸಿಸಿ ಬ್ಯಾಂಕ್ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕೇವಲ ರೈತರಿಗೆ ಸಾಲ ನೀಡಿದರೆ ಬ್ಯಾಂಕಿನ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದರು. “ಡಿಸಿಸಿ ಬ್ಯಾಂಕ್ ಮೂಲತಃ ರೈತರ ಬ್ಯಾಂಕ್ ಆಗಿದೆ. ನಷ್ಟವಾದರೂ ಸಹ ರೈತರಿಗೆ ಸಾಲ ನೀಡಲೇಬೇಕು ಎಂಬುದು ನಮ್ಮ ನಿಲುವು. ಸಾಲ ನೀಡುವ ಕುರಿತು ನಬಾರ್ಡ್ ಮತ್ತು ಆರ್.ಬಿ.ಐ ನಿರ್ದೇಶನಗಳಿದ್ದು, ಸಾಲದ ಮಿತಿ ಹೆಚ್ಚಿಸುವ ನಿರ್ಧಾರವೂ ಅವುಗಳಿಗೇ ಬಿಟ್ಟಿದ್ದಾಗಿದೆ,” ಎಂದು ತಿಳಿಸಿದರು.

ಇನ್ನು ರಾಜಕೀಯ ವಿಚಾರವಾಗಿ, ಡಿ.ಕೆ. ಶಿವಕುಮಾರ್ ಪರ ಚನ್ನರಾಜ್ ಹಟ್ಟಿಹೊಳಿ ಅವರ ಹೇಳಿಕೆ ಬಗ್ಗೆ ತಮಗೆ ಮಾಹಿತಿ ಇಲ್ಲವೆಂದು ಪ್ರತಿಕ್ರಿಯಿಸಲು ನಿರಾಕರಿಸಿದರು. ಅಲ್ಲದೆ, ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆಗಳು ಗ್ರಾ.ಪಂ ಚುನಾವಣೆಗಳ ನಂತರ ನಡೆಯಲಿವೆ ಎಂದು ಸ್ಪಷ್ಟಪಡಿಸಿದರು.
ಮುಂಬರುವ ಬಜೆಟ್ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡುವಂತೆ ಬೇಡಿಕೆ ಇಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಈಗಾಗಲೇ ನೀರಾವರಿ ಇಲಾಖೆಗೆ ಗಣನೀಯ ಅನುದಾನ ನೀಡಲಾಗಿದ್ದು, ಹಿಡಕಲ್ ಡ್ಯಾಂನಲ್ಲಿ ಬೃಂದಾವನ ಮಾದರಿಯ ಉದ್ಯಾನವನ ನಿರ್ಮಾಣ ಮತ್ತು ಗೋಕಾಕ ಪ್ರವಾಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಪಡೆಯಲು ಪ್ರಯತ್ನಿಸಲಾಗುವುದು. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಕಟ್ಟಡಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಫ್ಲೈ ಓವರ್ ಟೆಂಡರ್ ಬಾಕಿ ಇದೆ. ಜಿಲ್ಲಾಧಿಕಾರಿಗಳ ಆಗಮನದ ನಂತರ ಸಾರ್ವಜನಿಕರ ಸಮಸ್ಯೆಗಳ ಆಲಿಕೆಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

