ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತೀರುವ ಕ್ರೀಡಾ ಶಾಲೆಗಳ ಕ್ರೀಡಾ ಪಟುಗಳು ಉತ್ತಮ ಸ್ಥಾನಗಳನ್ನು ಗಳಿಸುವ ಮೂಲಕ ಜಿಲ್ಲೆಯ ಕೀರ್ತಿ, ಗೌರವವನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸುತ್ತಿದ್ದು, ಅವರ ಕ್ರೀಡಾ ತರಬೇತಿಗೆ ಅಗತ್ಯವಿರುವ ಉಪಕರಣ ಮತ್ತು ಸೌಲಭ್ಯಗಳನ್ನು ನೀಡಲು ಸೂಕ್ತವಾದ ಕ್ರಿಯಾಯೋಜನೆಯನ್ನು ರೂಪಿಸಿ, ಸಲ್ಲಿಸುವಂತೆ ಕ್ರೀಡಾ ಇಲಾಖೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ನಿರ್ದೇಶಿಸಿದರು.


ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ 2026-27 ನೇ ಸಾಲಿನ ಧಾರವಾಡ ಕ್ರೀಡಾ ಶಾಲೆ, ಕ್ರೀಡಾ ನಿಲಯಗಳಿಗೆ ತಾಲೂಕಾ ಮಟ್ಟದ ಕ್ರೀಡಾ ಪಟುಗಳ ಆಯ್ಕೆಗಾಗಿ ಅಧಿಕಾರಿಗಳ ಸಭೆ ಜರುಗಿಸಿ, ಬಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದರು.

ಜಿಲ್ಲೆಯಲ್ಲಿ ಕುಸ್ತಿ, ಜಿಮ್ನಾಸ್ಟಿಕ್, ಅಥ್ಲೆಟಿಕ್ ಕ್ರೀಡೆಗಳಲ್ಲಿ ತರಬೇತಿ ಪಡೆದಿರುವ ಯುವಕ, ಯುವತಿಯರು ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಚಿನ್ನ, ಬೆಳ್ಳಿ, ಕಂಚು ಸೇರಿದಂತೆ ವಿವಿಧ ರೀತಿಯ ಬಹುಮಾನಗಳನ್ನು ಪಡೆದು, ಜಿಲ್ಲೆಗೆ ಕೀರ್ತಿ ತರುತ್ತಿದ್ದಾರೆ. ಕ್ರೀಡಾ ಪಟುಗಳಿಗೆ ಅಗತ್ಯವಿರುವ ಜೀಮ್, ಮೈದಾನ ಮತ್ತು ಇತರ ಕ್ರೀಡಾ ಸಾಮಗ್ರಿಗಳನ್ನು ಪೂರೈಸಲು ಸಂಪೂರ್ಣವಾದ ಕ್ರಿಯಾಯೋಜನೆ ಸಲ್ಲಿಸಬೇಕು. ವೈದ್ಯಕೀಯ ಚಿಕಿತ್ಸೆಗಾಗಿ ಪ್ರತ್ಯೇಕ ವೈದ್ಯರನ್ನು ಕ್ರೀಡಾ ಇಲಾಖೆಗೆ ನೇಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅವರು ಹೇಳಿದರು.
ಕ್ರೀಡಾ ಶಾಲೆ ಮತ್ತು ವಸತಿ ನಿಲಯಗಳಲ್ಲಿ ವಾಸಿಸುವ ಮಕ್ಕಳಿಗೆ ಪೋಷಕಾಂಶ, ವಿಟಾಮಿನ್ ಇರುವ ಉತ್ತಮ ಗುಣಮಟ್ಟದ ಆಹಾರವನ್ನು ನೀಡಬೇಕು. ದೈಹಿಕವಾಗಿ ಮತ್ತು ಮಾನಸಿಕವಾಗಿ ವಿದ್ಯಾರ್ಥಿಗಳು ಸದೃಡವಾಗಿರುವಂತೆ ತರಬೇತಿದಾರರು ಮತ್ತು ಶಿಕ್ಷಕರು ಕ್ರಮವಹಿಸಬೇಕೆಂದು ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್. ಎಸ್. ಕೆಳದಿಮಠ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ, ಉಮೇಶ ಬೊಮ್ಮಕನವರ, ಮಹಾದೇವಿ ಮಾಡಲಗೇರಿ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ರೀಡಾ ಶಾಲೆ ಮತ್ತು ಕ್ರೀಡಾ ವಸತಿನಿಲಯಗಳ ನಿಲಯಪಾಲಕರು, ಕ್ರೀಡಾ ತರಬೇತಿದಾರರು ಉಪಸ್ಥಿತರಿದ್ದರು.
