ಬೆಳಗಾವಿಯ ಪ್ರಸಿದ್ಧ ಕೋಟೆ ಕೆರೆಯಲ್ಲಿ ಪೌರ ಕಾರ್ಮಿಕನೋರ್ವ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಸಂಭವಿಸಿದೆ. ಕೌಟುಂಬಿಕ ಕಲಹ ಹಾಗೂ ಮದ್ಯಪಾನದ ವ್ಯಸನದ ಹಿನ್ನೆಲೆಯಲ್ಲಿ ಈ ಅನಾಹುತ ನಡೆದಿದೆ ಎಂದು ಶಂಕಿಸಲಾಗಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗಾವಿ ನಗರದ ಶಾಹಾಪುರ ಘಾಡೆ ಕಾಲನಿ ನಿವಾಸಿ ಸುಭಾಷ ಹಲಗೇಕರ್ (32) ಮೃತಪಟ್ಟ ದುರ್ದೈವಿ.

ಸುಭಾಷ ಹಾಗೂ ಪತ್ನಿ ಮೇಘಾ ನಡುವೆ ನಿರಂತರವಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಇದರಿಂದ ಬೇಸತ್ತ ಪತ್ನಿ ಇತ್ತೀಚೆಗೆ ತವರು ಮನೆ ಸೇರಿದ್ದರು. ಪತ್ನಿ ಹೋದ ಬಳಿಕ ನಾಪತ್ತೆಯಾಗಿದ್ದ ಸುಭಾಷ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು. ಇಂದು ನಗರದ ಸಾಮ್ರಾಟ ಅಶೋಕ ವೃತ್ತದ ಬಳಿಯ ಕೋಟೆ ಕೆರೆಯಲ್ಲಿ ಸುಭಾಷ ಅವರ ಶವ ಪತ್ತೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಶವವನ್ನು ಹೊರತೆಗೆದಿದ್ದಾರೆ.
ಮೃತನ ಪತ್ನಿ ಮೇಘಾ ಮಾತನಾಡಿ, “ಪತಿಯ ಕುಡಿತದ ಚಟದಿಂದಾಗಿ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿತ್ತು. ಕುಡಿತ ಬಿಡುವಂತೆ ನಾವು ಹೇಳುತ್ತಿದ್ದೆವೇ ಹೊರತು ಯಾವುದೇ ಕಿರುಕುಳ ನೀಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕುಡಿತದ ವ್ಯಸನ ಮತ್ತು ಕೌಟುಂಬಿಕ ಅಶಾಂತಿ ಒಂದು ಜೀವವನ್ನು ಬಲಿಪಡೆದಿರುವುದು ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ.
