ಬಾಗಲಕೋಟೆ ಜಿಲ್ಲೆಯ ತೇರದಾಳ ಸಮೀಪದ ತಮದಡ್ಡಿ ಗ್ರಾಮದಲ್ಲಿ ಇಂದು ಭಕ್ತಿ ಸಂಭ್ರಮ ಮನೆಮಾಡಿತ್ತು. ಜೈನ ಸಮುದಾಯದ ಪವಿತ್ರ ಪಂಚ ಕಲ್ಯಾಣ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಭಗವಾನ್ ಮಹಾವೀರರ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ ಎಂದು ಇದೇ ವೇಳೆ ಅವರು ಅಭಿಪ್ರಾಯಪಟ್ಟರು.

ಬಾಗಲಕೋಟೆ ಜಿಲ್ಲೆಯ ತಮದಡ್ಡಿ ಗ್ರಾಮದಲ್ಲಿ ಜೈನ ಸಮುದಾಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಪಂಚ ಕಲ್ಯಾಣ ಪ್ರತಿಷ್ಠಾನ ಕಾರ್ಯಕ್ರಮವು ಅತ್ಯಂತ ಸಡಗರದಿಂದ ಜರುಗಿತು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಶ್ರೀ ಪಾರ್ಶ್ವನಾಥ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಜಗತ್ತಿಗೆ ಶಾಂತಿ ಮತ್ತು ಅಹಿಂಸೆಯ ಮಂತ್ರ ಸಾರಿದ ಈ ಪುಣ್ಯಭೂಮಿಗೆ ಭೇಟಿ ನೀಡುವ ಅವಕಾಶ ದೊರೆತಿದ್ದು ನನ್ನ ಸೌಭಾಗ್ಯ ಎಂದು ಅವರು ಈ ಸಂದರ್ಭದಲ್ಲಿ ಭಾವುಕರಾಗಿ ನುಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ ಅವರು, ಭಗವಾನ್ ಮಹಾವೀರರು ಬೋಧಿಸಿದ ಸತ್ಯ, ಅಹಿಂಸೆ ಹಾಗೂ ‘ಜೀವಿಸು ಮತ್ತು ಜೀವಿಸಲು ಬಿಡು’ ಎಂಬ ತತ್ವಗಳು ಇಡೀ ಮಾನವಕುಲಕ್ಕೆ ಜೈನ ಧರ್ಮ ನೀಡಿದ ಶ್ರೇಷ್ಠ ಸಂದೇಶಗಳಾಗಿವೆ ಎಂದರು. ಈ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡ ನಂತರ ಅವರು ಬನಹಟ್ಟಿ ನಗರದತ್ತ ಪ್ರಯಾಣ ಬೆಳೆಸಿದರು. ಕಾರ್ಯಕ್ರಮದಲ್ಲಿ ಜೈನ ಸಮುದಾಯದ ಪ್ರಮುಖರು, ಧಾರ್ಮಿಕ ಮುಖಂಡರು ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡು ಸಂಭ್ರಮಿಸಿದರು.
