Bagalkot

ಬಾಗಲಕೋಟೆ: ನೇಕಾರನ ಮನೆಯಲ್ಲಿ ಬಿ.ವೈ. ವಿಜಯೇಂದ್ರ ಸಂಭ್ರಮದ ಭೋಜನ

Share

ಬಾಗಲಕೋಟೆ ಜಿಲ್ಲೆಯ ಪ್ರವಾಸದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇಂದು ನೇಕಾರರ ಬದುಕಿಗೆ ಹತ್ತಿರವಾಗುವ ಪ್ರಯತ್ನ ನಡೆಸಿದರು. ಬನಹಟ್ಟಿಯ ಸಾಮಾನ್ಯ ನೇಕಾರ ಕುಟುಂಬವೊಂದರ ಮನೆಗೆ ಭೇಟಿ ನೀಡಿದ ಅವರು, ನೆಲದ ಮೇಲೆ ಕುಳಿತು ಉತ್ತರ ಕರ್ನಾಟಕದ ಸೊಗಡಿನ ಊಟ ಸವಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ನೇಕಾರ ಶಾಂತವೀರ ಅವರ ನಿವಾಸಕ್ಕೆ ಭೇಟಿ ನೀಡಿದ ಬಿ.ವೈ. ವಿಜಯೇಂದ್ರ ಅವರಿಗೆ ಕುಟುಂಬಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು. ನೇಕಾರರ ಮನೆಯ ಆತಿಥ್ಯವನ್ನು ಸ್ವೀಕರಿಸಿದ ಅವರು, ಕುಟುಂಬದ ಸದಸ್ಯರೊಂದಿಗೆ ನೆಲದ ಮೇಲೆ ಕುಳಿತು ಉತ್ತರ ಕರ್ನಾಟಕದ ಸಾಂಪ್ರದಾಯಿಕ ಖಾದ್ಯಗಳಾದ ಮಾದಲಿ, ಎಣ್ಣೆಗಾಯಿ ಬದನೆಕಾಯಿ ಪಲ್ಯ, ಮಡಿಕೆ ಕಾಳು, ಖಡಕ್ ರೊಟ್ಟಿ ಹಾಗೂ ಚಪಾತಿಯನ್ನು ಅತ್ಯಂತ ಪ್ರೀತಿಯಿಂದ ಸವಿದರು. ಈ ವೇಳೆ ವಿಜಯೇಂದ್ರ ಅವರು ನೇಕಾರ ಕುಟುಂಬದ ಸದಸ್ಯರೊಂದಿಗೆ ಹರಟೆ ಹೊಡೆಯುತ್ತಾ ಅತ್ಯಂತ ಸರಳವಾಗಿ ಭೋಜನ ಮುಗಿಸಿದ್ದು ವಿಶೇಷವಾಗಿತ್ತು.

ಕೇವಲ ಭೋಜನಕ್ಕೆ ಸೀಮಿತವಾಗದ ವಿಜಯೇಂದ್ರ ಅವರು, ನೇಕಾರ ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಸುದೀರ್ಘ ಸಂವಾದ ನಡೆಸಿದರು. ನೇಕಾರಿಕೆ ಉದ್ಯೋಗದ ಇಂದಿನ ಸ್ಥಿತಿಗತಿ, ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಮಾರುಕಟ್ಟೆಯ ಸಮಸ್ಯೆಗಳ ಕುರಿತು ಶಾಂತವೀರ ಅವರ ಕುಟುಂಬದವರೊಂದಿಗೆ ಚರ್ಚಿಸಿದರು. ನೇಕಾರರ ಸಮಸ್ಯೆಗಳನ್ನು ಹತ್ತಿರದಿಂದ ಆಲಿಸಿದ ಅವರು, ಸಮುದಾಯದ ಏಳಿಗೆಗಾಗಿ ಧ್ವನಿ ಎತ್ತುವ ಭರವಸೆ ನೀಡಿದರು. ರಾಜಕೀಯ ನಾಯಕನ ಈ ಸರಳತೆ ಮತ್ತು ಕಾಳಜಿಗೆ ಸ್ಥಳೀಯ ನೇಕಾರ ಸಮುದಾಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Tags:

error: Content is protected !!