ಭೀಮಾತೀರದ ನಟೋರಿಯಸ್ ಹಂತಕ ಬಾಗಪ್ಪ ಹರಿಜನ್ ಹತ್ಯೆಯಾಗಿದ್ದು ನಿನ್ನೆ ಅಂದರೆ ಫೆ.11 ಕ್ಕೆ ಒಂದು ವರ್ಷ ಪೂರೈಸಿದೆ. ಕಳೆದ 2025 ರ ಫೆಬ್ರವರಿ 11ರ ರಾತ್ರಿ, ವಿಜಯಪುರ ನಗರದ ರೇಡಿಯೋ ಕೇಂದ್ರದ ಸಮೀಪದ ಮದೀನಾ ನಗರದಲ್ಲಿ ಬಾಗಪ್ಪನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬಳಿಕ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.


ಮನೆಯ ಮುಂದೆ ನಿಂತಿದ್ದ ಬಾಗಪ್ಪನ ಮೇಲೆ ಏಕಾಏಕಿ ಎರಗಿದ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದರು. ಘಟನೆ ನಗರದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ನಿನ್ನೆಗೆ ಹತ್ಯೆಯಾಗಿ ಒಂದು ವರ್ಷವಾದ ಹಿನ್ನೆಲೆ, ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆದಿದ್ದ ಸ್ಥಳದಲ್ಲಿ ಕುಟುಂಬಸ್ಥರು, ಸಹಚರರು ಹಾಗೂ ಬೆಂಬಲಿಗರು ಪೂಜೆ ಪುನಸ್ಕಾರ ನೆರವೇರಿಸಿದರು. ಸಮಾಧಿಗೆ ವಿಶೇಷ ಪೂಜಾ ವಿಧಿವಿಧಾನಗಳು ನಡೆದಿದ್ದು, ಅದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಬಾಗಪ್ಪ ಹತ್ಯೆ ಆಸ್ತಿ ವಿವಾದ ಹಾಗೂ ರವಿ ಮೇಲಿನಮನಿ ಕೊಲೆ ಪ್ರಕರಣದ ಸೇಡಿನ ಹಿನ್ನೆಲೆ ನಡೆದಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ಪ್ರಕರಣದಲ್ಲಿ ರವಿಯ ಸಹೋದರ ಪ್ರಕಾಶ ಉರ್ಪ್ ಪಿಂಟ್ಯಾ ಮೇಲಿನಕೇರಿ, ರಾಹುಲ್ ತಳಕೇರಿ, ಸುದೀಪ್ ಕಾಂಬಳೆ ಮತ್ತು ಮಣಿಕಂಠ ಬೆನಕೊಪ್ಪ ವಿರುದ್ಧ ಆರೋಪ ಕೇಳಿಬಂದಿದ್ದು, ಅವರು ಸದ್ಯ ವಿಚಾರಣಾಧೀನ ಕೈದಿಗಳಾಗಿದ್ದಾರೆ.
