ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುವ ಕಾರ್ಯಕರ್ತರಿಗೆ ಎಂದಿಗೂ ಗೌರವ ಸಿಗುತ್ತದೆ ಎಂಬುದಕ್ಕೆ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್‌ನ ನೂತನ ನಾಮನಿರ್ದೇಶಿತ ನಿರ್ದೇಶಕರ ನೇಮಕವೇ ಸಾಕ್ಷಿ. ಬಾಳೇಶ ದಾಸನಟ್ಟಿ ಅವರ ನೇಮಕಕ್ಕೆ ಖಾನಾಪುರ ಕಾಂಗ್ರೆಸ್ ಘಟಕ ಹರ್ಷ ವ್ಯಕ್ತಪಡಿಸಿದೆ.
ಪಕ್ಷದ ಸಂಘಟನೆಗಾಗಿ ಮತ್ತು ತಳಮಟ್ಟದಲ್ಲಿ ಕಾಂಗ್ರೆಸ್ ಬಲಪಡಿಸಲು ಪ್ರಾಮಾಣಿಕವಾಗಿ ಶ್ರಮಿಸಿದ ಬಾಳೇಶ ದಾಸನಟ್ಟಿ ಅವರಿಗೆ ಬಿಡಿಸಿಸಿ (BDCC) ಬ್ಯಾಂಕ್‌ನ ಸರ್ಕಾರಿ ನಾಮನಿರ್ದೇಶಿತ ನಿರ್ದೇಶಕ ಸ್ಥಾನ ಒಲಿದು ಬಂದಿದೆ. ಖಾನಾಪುರದ ಲೋಕೋಪಯೋಗಿ ಇಲಾಖೆಯ ವಿಶ್ರಾಂತಿ ಗೃಹದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಬಾಲೇಶ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ಮಾದಾರ ಅವರು, “ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಿರುವುದು ಹೆಮ್ಮೆಯ ವಿಷಯ. ಇದು ಅವರ ಶ್ರಮಕ್ಕೆ ಸಂದ ಜಯ,” ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಬಾಬು ಹತ್ತರವಾಡ ಅವರು ನೂತನ ನಿರ್ದೇಶಕರಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು. ತದನಂತರ ಕೆಪಿಸಿಸಿ ಸದಸ್ಯ ಮಹಾದೇವ ಕೋಳಿ ಮತ್ತು ಪ್ರಕಾಶ್ ಮಾದಾರ ಅವರು ಪಕ್ಷದ ಸಿದ್ಧಾಂತ ಮತ್ತು ನಿಷ್ಠೆಯ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಇಸಾಕ್ ಖಾನ್ ಪಠಾಣ್, ತೋಹೀದ್ ಚಾಂದಖಾನವರ ಸೇರಿದಂತೆ ಪ್ರಮುಖ ಮುಖಂಡರು ಭಾಗವಹಿಸಿ, ಬಾಳೇಶ ಅವರ ನೇಮಕದಿಂದ ಸಹಕಾರಿ ಕ್ಷೇತ್ರದಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

