Hukkeri

ಆಸ್ತಿ ಕಬಳಿಸಲು ಉಪ-ನೋಂದಣಾಧಿಕಾರಿ ಸಂಚು: ನಕಲಿ ದಾಖಲೆ ಸೃಷ್ಟಿಸಿದ ಖದೀಮರ ಗ್ಯಾಂಗ್ ಅಂದರ್!

Share

ಬೇರೆಯವರ ಆಸ್ತಿಯನ್ನು ಲಪಟಾಯಿಸಲು ಸರಕಾರಿ ಅಧಿಕಾರಿಗಳೇ ಸಾಥ್ ನೀಡಿದರೆ ಜನ ಯಾರನ್ನು ನಂಬಬೇಕು? ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಉಪ-ನೋಂದಣಾಧಿಕಾರಿ ಹಾಗೂ ಅವರ ತಂಡ ನಕಲಿ ಸಹಿ, ಫೋಟೋ ಬಳಸಿ ಅಮಾಯಕರ ಆಸ್ತಿ ಕಬಳಿಸಲು ಹೋಗಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಈ ಬ್ರಹ್ಮಾಂಡ ಭ್ರಷ್ಟಾಚಾರದ ಜಾಲವನ್ನು ಬೆಳಗಾವಿ ಪೊಲೀಸರು ಬೇಧಿಸಿದ್ದಾರೆ.

ಹುಕ್ಕೇರಿ ತಾಲೂಕಿನ ಕುರುಣಿ ಗ್ರಾಮದ ಶಿವಾನಂದ ಕುದ್ದೂರಿ ಹಾಗೂ ಅವರ ಬಾಹುಬಂದರಿಗೆ ಸೇರಿದ ಜಮೀನನ್ನು ಕಬಳಿಸಲು ಸಂಚು ರೂಪಿಸಿದ್ದ ದೊಡ್ಡ ಜಾಲವನ್ನು ಯಮಕನಮರಡಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಹುಕ್ಕೇರಿ ಉಪ-ನೋಂದಣಾಧಿಕಾರಿ ಮಡಿವಾಳಯ್ಯ ಬಾನಿಮಠ ಸೇರಿದಂತೆ ಒಟ್ಟು ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ನಕಲಿ ಆಧಾರ್, ಪಾನ್ ಕಾರ್ಡ್‌ಗಳನ್ನು ಸೃಷ್ಟಿಸಿ, ಅಸಲಿ ಮಾಲೀಕರ ಬದಲಿಗೆ ಬೇರೆಯವರ ಫೋಟೋ ಹಚ್ಚಿ ಹುಕ್ಕೇರಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಕಲಿ ಕರಾರು ಪತ್ರಗಳನ್ನು ನೋಂದಣಿ ಮಾಡಿಸಿದ್ದರು.

ಬೆಳಗಾವಿ ಎಸ್ಪಿ ಕೆ. ರಾಮರಾಜನ್ ಅವರು ಇಂದು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿ, ಪ್ರಕರಣದ ಕಿಂಗ್‌ಪಿನ್ ನೀಲಕಂಠ ಮುದಪಾಕಿ ಹಾಗೂ ನಕಲಿ ದಾಖಲೆ ತಯಾರಿಸುತ್ತಿದ್ದ ಸ್ಟುಡಿಯೋ ಮಾಲೀಕ ಅಶೋಕ ಸೂರ್ಯವಂಶಿ ಎಂಬುವವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಇವರಿಂದ 13 ನಕಲಿ ದಾಖಲೆಗಳು ಹಾಗೂ ದಾಖಲೆ ತಯಾರಿಕೆಗೆ ಬಳಸುತ್ತಿದ್ದ ಕಂಪ್ಯೂಟರ್, ಲ್ಯಾಪಟಾಪ್ ಮತ್ತು ಲ್ಯಾಮಿನೇಶನ್ ಮಷೀನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಉಪ-ನೋಂದಣಾಧಿಕಾರಿ ಮಡಿವಾಳಯ್ಯ ಹಾಗೂ ಇನ್ನೊಬ್ಬ ಆರೋಪಿ ಆನಂದ ದಡ್ಡಿಮನಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದು ತನಿಖೆಗೆ ಹಾಜರಾಗಿದ್ದಾರೆ.
ಪವಿತ್ರವಾದ ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು ನಕಲಿ ಜಾಲಕ್ಕೆ ಸಾಥ್ ನೀಡಿದ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.

Tags:

error: Content is protected !!