ಬೆಳಗಾವಿಯ ಉದ್ಯಮಬಾಗದ ನಿವಾಸಿಗಳು ಈಗ ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಲಾಭದ ಆಸೆಗೆ ಬಿದ್ದ ಕೈಗಾರಿಕಾ ಘಟಕವೊಂದು ವಿಷಕಾರಿ ರಾಸಾಯನಿಕಗಳನ್ನು ನೇರವಾಗಿ ಮಣ್ಣಿಗೆ ಬಿಡುತ್ತಿದ್ದು, ಇದರಿಂದ ಅಂತರ್ಜಲವೇ ವಿಷಮಯವಾಗಿದೆ. ಈ ಕುರಿತು ಇಂದು ನೂರಾರು ನಾಗರಿಕರು ಪಾಲಿಕೆ ಆಯುಕ್ತರಿಗೆ ಮುತ್ತಿಗೆ ಹಾಕಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.


ಬೆಳಗಾವಿಯ ಉದ್ಯಮಬಾಗದ ಜಿಐಟಿ ಕಾಲೇಜು ಸಮೀಪವಿರುವ ರಾಜಾರಾಮ್ ನಗರದಲ್ಲಿ ‘ಶಾಂತಿ ಕೆಮಿಕಲ್ಸ್’ ಎಂಬ ಫ್ಯಾಕ್ಟರಿಯ ಬೇಜವಾಬ್ದಾರಿಯಿಂದ ಸಾರ್ವಜನಿಕರ ಬದುಕು ದುಸ್ತರವಾಗಿದೆ. ಕಾರ್ಖಾನೆಯಿಂದ ಹೊರಬರುವ ಸಂಸ್ಕರಿಸದ ರಾಸಾಯನಿಕ ಮಿಶ್ರಿತ ನೀರು ಪಕ್ಕದ ವಸತಿ ಪ್ರದೇಶದ ಬಾವಿಗಳಿಗೆ ಸೇರುತ್ತಿದೆ. ಇದರಿಂದಾಗಿ ಪ್ರದೇಶದ ಬಾವಿ ನೀರು ಸಂಪೂರ್ಣ ಕಲುಷಿತಗೊಂಡು ಕಪ್ಪು ಬಣ್ಣಕ್ಕೆ ತಿರುಗಿದ್ದು, ಕುಡಿಯಲು ಅಸಾಧ್ಯವಾದ ರೀತಿಯಲ್ಲಿ ದುರ್ನಾತ ಬೀರುತ್ತಿದೆ.
ಈ ಕಲುಷಿತ ನೀರನ್ನು ಅನಿವಾರ್ಯವಾಗಿ ಬಳಸುತ್ತಿರುವ ಸ್ಥಳೀಯರಲ್ಲಿ ಚರ್ಮವ್ಯಾಧಿ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಈ ಬಗ್ಗೆ ಕಾರ್ಖಾನೆ ಮಾಲೀಕರಿಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಇಂದು ಸ್ಥಳೀಯರು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕೂಡಲೇ ಫ್ಯಾಕ್ಟರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಜನರಿಗೆ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ನಾಗರಿಕರು ಪಟ್ಟು ಹಿಡಿದಿದ್ದಾರೆ.
