ಬೆಳಗಾವಿ ಜಿಲ್ಲೆಯಲ್ಲಿ ರಸ್ತೆಗಳ ಮೇಲೆ ಅತಿರೇಕದ ಪ್ರದರ್ಶನ ನೀಡುವ ಪುಂಡರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಈಗ ಸಿಂಹಸ್ವಪ್ನವಾಗಿದ್ದಾರೆ. ಹುಟ್ಟುಹಬ್ಬದ ಹೆಸರಲ್ಲಿ ಸಾರ್ವಜನಿಕ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಹವಾ ಸೃಷ್ಟಿಸಲು ಹೋದ ಯುವಕರಿಗೆ ಬಿಸಿ ಮುಟ್ಟಿಸಿರುವ ಎಸ್ಪಿ ಅವರು, ಇನ್ನುಮುಂದೆ ಇಂತಹ ಕೃತ್ಯವೆಸಗಿದರೆ ರೌಡಿಕೇಸ್ ಮತ್ತು ಗಡಿಪಾರು ಗ್ಯಾರಂಟಿ ಎಂಬ ಸಂದೇಶ ರವಾನಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ನುಗ್ಗಾನಟ್ಟಿ ಕ್ರಾಸ್ ಬಳಿ ಯರಗಟ್ಟಿಯ ಸುರೇಶ್ ಭಜಂತ್ರಿ ಎಂಬಾತನ ಜನ್ಮದಿನದ ಅಂಗವಾಗಿ ಕಾನೂನು ಬಾಹಿರವಾಗಿ ಬೈಕ್ ವ್ಹೀಲಿಂಗ್ ನಡೆಸಲಾಗಿತ್ತು. ಈ ಕುರಿತು ಮಾಹಿತಿ ಪಡೆದ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಕೃತ್ಯಕ್ಕೆ ಬಳಸಲಾಗಿದ್ದ ಒಂದು ಮಹೀಂದ್ರ ಜೀಪ್ ಹಾಗೂ 11 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಎಸ್ಪಿ ಕೆ. ರಾಮರಾಜನ್ ಅವರು, ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಟ್ಟು ನಿಮ್ಮ ‘ಹವಾ’ ತೋರಿಸಲು ಇಲ್ಲಿ ಅವಕಾಶವಿಲ್ಲ ಎಂದು ಪುಂಡರಿಗೆ ನೇರ ಎಚ್ಚರಿಕೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, ಇಂತಹ ಅಪಾಯಕಾರಿ ವರ್ತನೆಗಳನ್ನು ಪೊಲೀಸರು ಸಹಿಸುವುದಿಲ್ಲ. ಒಂದು ವೇಳೆ ಇಂತಹ ಘಟನೆಗಳು ಮರುಕಳಿಸಿದರೆ ತಕ್ಷಣವೇ ರೌಡಿಶೀಟರ್ ಪಟ್ಟಿಗೆ ಸೇರಿಸಲಾಗುವುದು. ಅಷ್ಟಕ್ಕೂ ಬುದ್ಧಿ ಬರದಿದ್ದರೆ ಅಂತಹವರನ್ನು ಜಿಲ್ಲೆಯಿಂದ ಗಡಿಪಾರು ಮಾಡುವ ಕಠಿಣ ಕ್ರಮ ಜರುಗಿಸಲಾಗುವುದು ಎಂದರು. ಸಾರ್ವಜನಿಕರು ಇಂತಹ ಅಕ್ರಮ ಘಟನೆಗಳ ಬಗ್ಗೆ ಯಾವುದೇ ಅಳುಕಿಲ್ಲದೆ ‘ಕರ್ನಾಟಕ ಪೊಲೀಸ್ ಆಪ್’ ಮೂಲಕ ಅನಾಮಧೇಯ ದೂರು ಸಲ್ಲಿಸಬಹುದು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
