ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಲು ಖದೀಮರು ಹೊಸ ಐಡಿಯಾ ಹುಡುಕಿದ್ದಾರೆ. ಬೈಲಹೊಂಗಲ ತಾಲೂಕಿನ ನಯಾನಗರ ಬಳಿ ಮಲಪ್ರಭಾ ನದಿಯಲ್ಲಿ ಬರೋಬ್ಬರಿ ಮೂರು ಬೈಕ್ಗಳನ್ನು ಸಂಶಯಾಸ್ಪದ ರೀತಿಯಲ್ಲಿ ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಬೈಕ್ ಕಳ್ಳತನ ಮಾಡಿ, ಬಳಿಕ ಸಾಕ್ಷ್ಯ ನಾಶಪಡಿಸಲು ದುಷ್ಕರ್ಮಿಗಳು ನಡೆಸಿರುವ ಈ ಐನಾತಿ ಕೃತ್ಯ ಪೊಲೀಸರನ್ನೇ ಬೆರಗಾಗಿಸಿದೆ.

ಬೈಲಹೊಂಗಲ ತಾಲೂಕಿನ ನಯಾನಗರ ಬಳಿ ಮಲಪ್ರಭಾ ನದಿಯ ಪಾತ್ರದಲ್ಲಿ ಮೂರು ಬೈಕ್ಗಳು ಅನುಮಾನಾಸ್ಪದವಾಗಿ ಪತ್ತೆಯಾಗಿವೆ. ನದಿಯಲ್ಲಿ ಬೈಕ್ ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಬೈಲಹೊಂಗಲ ಪೊಲೀಸರು, ಸ್ಥಳೀಯರ ಸಹಾಯದೊಂದಿಗೆ ನದಿ ನೀರಿನಿಂದ ಮೂರು ಬೈಕ್ಗಳನ್ನು ಹೊರತೆಗೆದಿದ್ದಾರೆ. ಖದೀಮರು ಬೈಕ್ ಕದ್ದು, ತಮ್ಮ ಕೃತ್ಯಗಳಿಗೆ ಬಳಸಿಕೊಂಡ ನಂತರ ಪೊಲೀಸರಿಗೆ ಸಿಕ್ಕಿಬೀಳುವ ಭಯದಲ್ಲಿ ನದಿಗೆ ಎಸೆದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ನದಿಯಿಂದ ಹೊರತೆಗೆದ ಬೈಕ್ಗಳಲ್ಲಿ ಎರಡು ಬೈಕ್ಗಳ ನಂಬರ್ ಪ್ಲೇಟ್ ಪತ್ತೆಯಾಗಿದ್ದು, ಅವುಗಳಲ್ಲಿ *KA-25-G-1459* ಮತ್ತು *KA-24-J-7907* ಸೇರಿವೆ. ಮತ್ತೊಂದು ಬೈಕ್ಗೆ ನಂಬರ್ ಪ್ಲೇಟ್ ಇಲ್ಲದಿರುವುದು ಕಳ್ಳರ ಜಾಲದ ಗಾತ್ರವನ್ನು ತೋರಿಸುತ್ತಿದೆ. ಈ ದೃಶ್ಯ ಕಂಡು ಖದೀಮರ ಐನಾತಿ ಐಡಿಯಾಗೆ ಪೊಲೀಸರೇ ಬೆರಗಾಗಿದ್ದಾರೆ. ಸದ್ಯ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬೈಕ್ಗಳ ಮೂಲ ಮಾಲೀಕರ ಪತ್ತೆ ಮತ್ತು ಖದೀಮರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇನ್ನು ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಕೆ.ರಾಮರಾಜನ್ ಅವರು ನದಿಯಲ್ಲಿದ್ದ ಹೊಂಡಾಶೈನ್ ಅಪಾಚಿ ಮತ್ತು ಸ್ಪೆಂಡರ್ ಪ್ಲಸ್ ಬೈಕ್’ಗಳನ್ನು ಈಗಾಗಲೇ ಹೊರ ತೆಗೆದು ವಶಕ್ಕೆ ಪಡೆಯಲಾಗಿದೆ. ಸವದತ್ತಿಯಲ್ಲಿ ನಡೆದ ಜ್ವೇಲರ್ಸ್ ದರೋಡೆಗೆ ಸಂಬಂಧಿಸಿದಂತೆ ಈ ಬೈಕ್’ಗಳನ್ನು ಬಳಸಿ, ನಂತರ ನದಿಯಲ್ಲಿ ಅವುಗಳನ್ನು ಎಸೆದು ಹೋಗಿರುವುದು ತಿಳಿದು ಬಂದಿದ್ದು, ತನಿಖೆ ಮುಂದುವರೆದಿದೆ ಎಂದರು.
