Bagalkot

ಅನ್ನದಾತನಿಗೆ ಖರೀದಿ ಕೇಂದ್ರದಲ್ಲೇ ಮೋಸ; ಬೆಂಬಲ ಬೆಲೆ ಮೀರಿ ಕಮ್ಮಿ ದರಕ್ಕೆ ಮೆಕ್ಕೆಜೋಳ ಖರೀದಿ!

Share

ಸರ್ಕಾರದ ಖರೀದಿ ಕೇಂದ್ರಗಳೇ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿವೆಯೇ? ಬಾಗಲಕೋಟೆ ಜಿಲ್ಲೆಯ ಕೆರೂರು ಪಟ್ಟಣದಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ ಖರೀದಿ ಕೇಂದ್ರದಲ್ಲೇ ಹಣದ ಬರೆ ಎಳೆಯಲಾಗುತ್ತಿದೆ. ಸರ್ಕಾರದ ಆದೇಶವಿದ್ದರೂ ಸಹ ಕ್ವಿಂಟಲ್‌ಗೆ 300 ರೂಪಾಯಿ ಕಡಿಮೆ ದರ ನೀಡಿ ರೈತರನ್ನು ಶೋಷಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಕೆರೂರು ಪಟ್ಟಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರದ ಗೊಂದಲದಿಂದಾಗಿ ರೈತರು ಆಕ್ರೋಶಗೊಂಡಿದ್ದಾರೆ. ಮೊದಲು ಕಾರ್ತಿಕ್ ಆಗ್ರೋ ಕಾರ್ಖಾನೆಯು 45 ಸಾವಿರ ಕ್ವಿಂಟಲ್ ಖರೀದಿ ಮಾಡಬೇಕಿತ್ತು, ಆದರೆ ಕೇವಲ 14 ಸಾವಿರ ಕ್ವಿಂಟಲ್ ಖರೀದಿ ಮಾಡಿ ಕೇಂದ್ರವನ್ನು ಸ್ಥಗಿತಗೊಳಿಸಿತ್ತು. ಈಗ 20 ದಿನಗಳ ನಂತರ ಕೇಂದ್ರ ಆರಂಭವಾಗಿದ್ದರೂ, ವಾಸವಿ ಟ್ರೇಡರ್ಸ್ ಮೂಲಕ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ.

ಸರ್ಕಾರ ಘೋಷಿಸಿದ 2400 ರೂ. ಬೆಂಬಲ ಬೆಲೆಯ ಬದಲಾಗಿ, ಇಲ್ಲಿ ಕ್ವಿಂಟಲ್‌ಗೆ ಕೇವಲ 1800 ರೂ. ಜೊತೆಗೆ ಸರ್ಕಾರದ 250 ರೂ. ಸೇರಿಸಿ ಒಟ್ಟು 2100 ರೂ. ಮಾತ್ರ ನೀಡಲಾಗುತ್ತಿದೆ. ಇದರಿಂದ ಪ್ರತಿ ಕ್ವಿಂಟಲ್‌ಗೆ ರೈತರಿಗೆ 300 ರೂಪಾಯಿ ನೇರ ನಷ್ಟವಾಗುತ್ತಿದೆ. ಕೆರೂರು ವ್ಯಾಪ್ತಿಯಲ್ಲಿ ಸುಮಾರು 30 ಸಾವಿರ ಕ್ವಿಂಟಲ್ ಮೆಕ್ಕೆಜೋಳ ನೋಂದಣಿಯಾಗಿದ್ದು, ರೈತರ ಈ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಎದ್ದಿದೆ. ಖರೀದಿ ಕೇಂದ್ರದ ಈ ಮನಸೋಇಚ್ಛೆ ನಿರ್ಧಾರದ ವಿರುದ್ಧ ರೈತರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Tags:

error: Content is protected !!