Bagalkot

ಬಾಗಲಕೋಟೆಯಲ್ಲಿ ಬೀದಿನಾಯಿಗಳ ರೌದ್ರಾವತಾರ: 20 ಮೇಕೆಗಳು ಬಲಿ, ಕಂಗಾಲಾದ ಅನ್ನದಾತ!

Share

ಬಾಗಲಕೋಟೆ ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಮೂಕ ಪ್ರಾಣಿಗಳ ಮೇಲೆ ಹಿಂಡು ಹಿಂಡಾಗಿ ದಾಳಿ ನಡೆಸುತ್ತಿವೆ. ಬೀಳಗಿ ತಾಲೂಕಿನ ಗೋವಿನದಿನ್ನಿ ಗ್ರಾಮದಲ್ಲಿ ನಾಯಿಗಳ ದಾಳಿಗೆ ಬರೋಬ್ಬರಿ 20 ಮೇಕೆಗಳು ಬಲಿಯಾಗಿದ್ದು, ಬಡ ರೈತನ ಬದುಕು ಬೀದಿಗೆ ಬಂದಿದೆ.

ಬೀಳಗಿ ತಾಲೂಕಿನ ಗೋವಿನದಿನ್ನಿ ಪುನರ್ವಸತಿ ಕೇಂದ್ರದ ನಿವಾಸಿ ಬಸವರಾಜ ಬುಗಡಿ ಎಂಬುವವರಿಗೆ ಸೇರಿದ ಮೇಕೆಗಳ ಮೇಲೆ ಈ ಭೀಕರ ದಾಳಿ ನಡೆದಿದೆ. ಶನಿವಾರ ತಡರಾತ್ರಿ ಸುಮಾರು 8 ರಿಂದ 10 ಬೀದಿನಾಯಿಗಳ ಹಿಂಡು ಏಕಾಏಕಿ ಕೊಟ್ಟಿಗೆಗೆ ನುಗ್ಗಿ ರಕ್ತಪಾತ ನಡೆಸಿವೆ. ಈ ದಾಳಿಯಲ್ಲಿ 20 ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂರು ಮರಿಗಳು ಸಾವು-ಬದುಕಿನ ನಡುವೆ ಹೋರಾಡುತ್ತಿವೆ.

ತನ್ನ ಜೀವನೋಪಾಯಕ್ಕಾಗಿ ಸಾಕಿದ್ದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಮೇಕೆಗಳನ್ನು ಕಳೆದುಕೊಂಡ ರೈತ ಬಸವರಾಜ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸಂಕಷ್ಟದಲ್ಲಿರುವ ರೈತನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

Tags:

error: Content is protected !!