ಬಜಾವತ್ ಆಯೋಗದ ವರದಿಯನ್ವಯ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಅನ್ನು ತಕ್ಷಣವೇ ಅನುಷ್ಠಾನಗೊಳಿಸಬೇಕು ಹಾಗೂ ಇದನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ನೇತೃತ್ವದಲ್ಲಿ ರೈತರು ಬೃಹತ್ ಹೋರಾಟ ನಡೆಸಿದರು. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಜಮಾಯಿಸಿದ ನೂರಾರು ರೈತರು, ಸರ್ಕಾರದ ವಿಳಂಬ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲ ನಿಗಮದ (KBJNL) ವ್ಯವಸ್ಥಾಪಕ ನಿರ್ದೇಶಕರಿಗೆ ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು. ಬಜಾವತ್ ಆಯೋಗದ ತೀರ್ಪಿನಂತೆ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳನ್ನು ಯುದ್ಧೋಪಾದಿಯಲ್ಲಿ ಆರಂಭಿಸಬೇಕು. ರಾಷ್ಟ್ರೀಯ ಯೋಜನೆ ಘೋಷಣೆ: ಈ ಯೋಜನೆಯು ಬೃಹತ್ ಮೊತ್ತದ ಅನುದಾನವನ್ನು ಬಯಸು ವುದರಿಂದ, ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಆರ್ಥಿಕ ನೆರವು ನೀಡಬೇಕು. ನಿಗದಿತ ಅವಧಿಯೊಳಗೆ ಕಾಲುವೆ ಜಾಲಗಳನ್ನು ಪೂರ್ಣಗೊಳಿಸಿ ಉತ್ತರ ಕರ್ನಾಟಕದ ರೈತರ ಜಮೀನುಗಳಿಗೆ ನೀರು ತಲುಪಿಸಬೇಕು ಎಂದು ಆಗ್ರಹಿಸಿದರು. ಈ ಬೃಹತ್ ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಎ. ಪಾಟೀಲ್ ಮದ್ದರಕಿ ಹಾಗೂ ಉತ್ತರ ಕರ್ನಾಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಬಿ. ಯಾದಗಿರಿ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ದಶಕಗಳಿಂದಲೂ ಉತ್ತರ ಕರ್ನಾಟಕದ ರೈತರು ಈ ಯೋಜನೆಗಾಗಿ ಕಾಯುತ್ತಿದ್ದಾರೆ. ಸರ್ಕಾರಗಳು ಕೇವಲ ಭರವಸೆ ನೀಡುತ್ತಿವೆಯೇ ಹೊರತು, ವಾಸ್ತವದಲ್ಲಿ ಕೆಲಸಗಳು ಕುಂಟುತ್ತಾ ಸಾಗಿವೆ. ಹಂತ-3 ಜಾರಿಯಾದರೆ ಮಾತ್ರ ಈ ಭಾಗದ ರೈತರ ಬದುಕು ಹಸನಾಗಲು ಸಾಧ್ಯ,” ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ವಿಜಯಪುರ, ಬಾಗಲಕೋಟೆ ಹಾಗೂ ಯಾದಗಿರಿ ಜಿಲ್ಲೆಗಳ ವಿವಿಧ ಭಾಗಗಳಿಂದ ನೂರಾರು ರೈತರು ಮತ್ತು ರೈತ ಮುಖಂಡರು ಪಾಲ್ಗೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

