Accident

ರಾಮನಗರ–ಅಳ್ನಾವರ ಹೆದ್ದಾರಿಯಲ್ಲಿ ಭೀಕರ ಅಪಘಾತ: ಪಿಕಪ್–ಬೈಕ್ ಮುಖಾಮುಖಿ ಡಿಕ್ಕಿ, ಗೋವಾ ಮೂಲದ ಯುವಕ ಸಾವು

Share

ರಾಮನಗರ–ಅಳ್ನಾವರ ಹೆದ್ದಾರಿಯಲ್ಲಿ ಇಂದು ರಕ್ತ ಹರಿದಿದೆ. ತಿರುವೊಂದರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಹದಿನೇಳು ವರ್ಷದ ಯುವಕನೊಬ್ಬ ಬಲಿಯಾಗಿದ್ದು, ಮತ್ತೊಬ್ಬ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಖಾನಾಪೂರ ತಾಲೂಕಿನ ಸುವಾತವಾಡಿ ಮತ್ತು ಕುಂಬಾರ್ಡಾ ಗ್ರಾಮಗಳ ಮಧ್ಯದ ತಿರುವಿನಲ್ಲಿ ಬೊಲೆರೋ ಪಿಕಪ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಯುವಕನೊಬ್ಬ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಮೃತನನ್ನು ಗೋವಾ ರಾಜ್ಯದ ಬೆಟೋಡಾ ಫೋಂಡಾ ನಿವಾಸಿ ಮಹಮ್ಮದ್ ಏಜಾಜ್ ಸಿದ್ದಿಕಿ (17) ಎಂದು ಗುರುತಿಸಲಾಗಿದೆ. ಬೈಕ್‌ನ ಹಿಂದೆ ಕುಳಿತಿದ್ದ ಮಹಮ್ಮದ್ ಸ್ಥಳದಲ್ಲೇ ಮೃತಪಟ್ಟರೆ, ಬೈಕ್ ಚಾಲಕ ಲತೀಫ್ ತನ್ವಿ (20) ಕಾಲಿಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಖಾನಾಪೂರ ಪೊಲೀಸರು ಭೇಟಿ ನೀಡಿ ಪಂಚನಾಮೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಖಾನಾಪೂರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ರಸ್ತೆಯ ತಿರುವಿನಲ್ಲಿ ವಾಹನಗಳ ವೇಗ ನಿಯಂತ್ರಣ ತಪ್ಪಿದ್ದೇ ಈ ದುರ್ಘಟನೆಗೆ ಕಾರಣವೆಂದು ಪ್ರಾಥಮಿಕ ಅಂದಾಜಿನಿಂದ ತಿಳಿದುಬಂದಿದೆ. ಖಾನಾಪೂರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Tags:

error: Content is protected !!