Accident

ಮುಧೋಳದಲ್ಲಿ ಸಂಭವಿಸಿತು ಭೀಕರ ರಸ್ತೆ ದುರಂತ: ಲಾರಿ-ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ತಾಯಿ-ಮಗು ದುರ್ಮರಣ

Share

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಅತಿವೇಗದಿಂದ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಮೈದುನನ ಜೊತೆ ಊರಿಗೆ ಹೊರಟಿದ್ದ ತಾಯಿ ಮತ್ತು ಕೇವಲ ಎರಡು ವರ್ಷದ ಹಸುಗೂಸು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಸೊರಗಾವಿ ಗ್ರಾಮದ ಬಳಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಮುಧೋಳ ತಾಲೂಕಿನ ಮಳಲಿ ಗ್ರಾಮದ ಮಂಜುಳಾ ದಳವಾಯಿ (28) ಮತ್ತು ಆಕೆಯ ಎರಡು ವರ್ಷದ ಮಗು ವೇಧಾ ಎಂದು ಗುರುತಿಸಲಾಗಿದೆ. ಮಂಜುಳಾ ಅವರು ತಮ್ಮ ಮೈದುನ ಹಣಮಂತ್ ಅವರ ಜೊತೆ ಬೈಕ್‌ನಲ್ಲಿ ಮಳಲಿ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಲಾರಿಯ ಭೀಕರ ಡಿಕ್ಕಿಯಿಂದಾಗಿ ತಾಯಿ-ಮಗು ರಸ್ತೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಈ ಅಪಘಾತದಲ್ಲಿ ಬೈಕ್ ಸವಾರ ಹಣಮಂತ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸಂಚಾರಿ ನಿಯಮಗಳ ಉಲ್ಲಂಘನೆ ಹಾಗೂ ಅತಿವೇಗವೇ ಈ ಸಾವಿನ ಸರಣಿಗೆ ಕಾರಣ ಎನ್ನಲಾಗುತ್ತಿದ್ದು, ಲಾರಿ ಚಾಲಕನ ವಿರುದ್ಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಳಲಿ ಗ್ರಾಮದ ಕುಟುಂಬವೊಂದರ ಆಸರೆಯಾಗಿದ್ದ ತಾಯಿ-ಮಗು ಸಾವನ್ನಪ್ಪಿರುವುದು ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.

Tags:

error: Content is protected !!