ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ರೈತರೊಬ್ಬರು ಕಷ್ಟಪಟ್ಟು ಸಂಗ್ರಹಿಸಿಟ್ಟಿದ್ದ ಸುಮಾರು ಮೂರು ಟ್ರ್ಯಾಕ್ಟರ್‌ಗೂ ಅಧಿಕ ಮೇವು ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣವಾಗಿ ಭಸ್ಮವಾಗಿದ್ದು, ರೈತ ಕುಟುಂಬ ಬೀದಿಗೆ ಬಿದ್ದಿದೆ.

ಖಾನಾಪುರ ತಾಲೂಕಿನ ನಂದಗಡ ಗ್ರಾಮದ 3ನೇ ವಾರ್ಡ್‌ನಲ್ಲಿರುವ ಸೀತಾರಾಮ ಅಸ್ಟೇಕರ್ ಎಂಬ ರೈತನಿಗೆ ಸೇರಿದ ಮೇವಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಇಡೀ ಮೇವು ಸುಟ್ಟು ಬೂದಿಯಾಗಿದೆ. ನಂದಗಡ ಡ್ಯಾಂಗೆ ಹೋಗುವ ರಸ್ತೆಯಲ್ಲಿರುವ ಮನೆಯ ಪಕ್ಕದಲ್ಲೇ ಈ ಘಟನೆ ನಡೆದಿದ್ದು, ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ಪಕ್ಕದಲ್ಲೇ ಇದ್ದ ಶಂಕರ್ ಅಸ್ಟೇಕರ್ ಅವರ ಮನೆಗೂ ಬೆಂಕಿ ಆವರಿಸುವ ಭೀತಿ ಎದುರಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಬೆಂಕಿ ನಂದಿಸಲು ಮುಂದಾದ ಕಾರಣ ಒಂದು ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಲೈನ್‌ಮ್ಯಾನ್, ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹೆಚ್ಚಿನ ಅಪಾಯವಾಗದಂತೆ ತಡೆದಿದ್ದಾರೆ. ಕಣ್ಣೆದುರೇ ಸುಮಾರು ಮೂರು ಟ್ರ್ಯಾಕ್ಟರ್‌ಗೂ ಅಧಿಕ ಪ್ರಮಾಣದ ಮೇವು ಸುಟ್ಟು ಕರಕಲಾಗುತ್ತಿರುವುದನ್ನು ಕಂಡು ರೈತ ಸೀತಾರಾಮ ಅಸ್ಟೇಕರ್ ಕಂಗಾಲಾಗಿದ್ದಾರೆ. ಈ ಬೆಂಕಿ ಅವಘಡದಿಂದ ರೈತನಿಗೆ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದ್ದು, ಕಷ್ಟಪಟ್ಟು ಬೆಳೆಸಿದ ಮೇವು ಕೈತಪ್ಪಿದ್ದಕ್ಕೆ ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದ್ದಾರೆ. ನಂದಗಡ ಭಾಗದಲ್ಲಿ ಈ ಘಟನೆ ಆತಂಕ ಮೂಡಿಸಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
