ಬಾಗಲಕೋಟೆಯ ಐತಿಹಾಸಿಕ ಟೀಕಿನಮಠದಲ್ಲಿ ಈಗ ಸಂಭ್ರಮದ ವಾತಾವರಣ. ಮಲ್ಲಿಕಾರ್ಜುನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಭಕ್ತರು ತನು-ಮನ-ಧನದಿಂದ ಸೇವೆಯಲ್ಲಿ ತೊಡಗಿದ್ದು, ವಿಶೇಷವಾಗಿ ಮಹಿಳಾ ಮಣಿಯರು ಅದ್ದೂರಿ ರೊಟ್ಟಿ ಬುತ್ತಿ ಸಮರ್ಪಿಸುವ ಮೂಲಕ ಗಮನ ಸೆಳೆದಿದ್ದಾರೆ.


ಬಾಗಲಕೋಟೆಯ ಟೀಕಿನಮಠದ ಶ್ರೀ ಮಲ್ಲಿಕಾರ್ಜುನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವದ ಪ್ರಯುಕ್ತ ನಗರದ ಕೌಲಪೇಟೆ ಓಣಿಯ ಮಹಿಳೆಯರು ಅಪೂರ್ವ ಭಕ್ತಿ ಮೆರೆದಿದ್ದಾರೆ. ಮಠದಲ್ಲಿ ನಡೆಯಲಿರುವ ದಾಸೋಹ ಕಾರ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಸುಮಾರು 150ಕ್ಕೂ ಹೆಚ್ಚು ಮಹಿಳೆಯರು ಒಗ್ಗೂಡಿ, ಮಠಕ್ಕೆ ರೊಟ್ಟಿ ಬುತ್ತಿಯನ್ನು ಸಮರ್ಪಿಸಿದರು. ಕೌಲಪೇಟೆಯಿಂದ ಶ್ರೀಮಠದವರೆಗೆ ಭಕ್ತಿಯಿಂದ ರೊಟ್ಟಿ ಬುತ್ತಿಯನ್ನು ಹೊತ್ತು ತಂದ ಮಹಿಳೆಯರು, ಮಠದ ಪಟ್ಟಾಧಿಕಾರ ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸಿದರು.

ಈ ಸೇವೆಯ ಅಂಗವಾಗಿ ಸುಮಾರು 3000ಕ್ಕೂ ಹೆಚ್ಚು ರೊಟ್ಟಿಗಳು, ಅನ್ನ ಹಾಗೂ ರುಚಿಕರವಾದ ಚಟ್ನಿಯನ್ನು ದಾಸೋಹಕ್ಕಾಗಿ ನೀಡಲಾಯಿತು. ಕೇವಲ ಅನ್ನದಾಸೋಹಕ್ಕೆ ಮಾತ್ರವಲ್ಲದೆ, ಮಹಿಳಾ ಭಕ್ತರೆಲ್ಲರೂ ಸೇರಿ ಒಟ್ಟು 4,650 ರೂಪಾಯಿಗಳ ಗುರುದಕ್ಷಿಣೆಯನ್ನು ಮಠಕ್ಕೆ ಅರ್ಪಿಸುವ ಮೂಲಕ ತಮ್ಮ ಗುರುಭಕ್ತಿಯನ್ನು ಸಾರ್ಥಕಪಡಿಸಿಕೊಂಡರು. ಸ್ಥಳೀಯ ಮಹಿಳೆಯರ ಈ ಸಾಂಘಿಕ ಪ್ರಯತ್ನ ಮತ್ತು ಶ್ರದ್ಧೆಗೆ ಮಠದ ಭಕ್ತವೃಂದ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
