BELAGAVI

ಮಹಿಳೆಯರ ನಿರಂತರ ಕಲಿಕೆಯೇ ಸಬಲೀಕರಣದ ಹಾದಿ: ಕೌನ್ಸಿಲರ್ ಪುಷ್ಪ ಪರ್ವತ ರಾವ್ ಕರೆ

Share

ಬೆಳಗಾವಿಯ ಮಹಾಂತೇಶ್ ನಗರದ ಮಹಾಲಕ್ಷ್ಮಿ ಮಹಿಳಾ ಮಂಡಲದಲ್ಲಿ ಸಂಕ್ರಾಂತಿ ಸಂಭ್ರಮ ಹಾಗೂ ಗಣರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.

ಬೆಳಗಾವಿ ಮಹಾಂತೇಶ್ ನಗರದ ಮಹಾಲಕ್ಷ್ಮಿ ಮಹಿಳಾ ಮಂಡಲ ಆಯೋಜಿಸಿದ್ದ ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೌನ್ಸಿಲರ್ ಪುಷ್ಪ ಪರ್ವತ ರಾವ್ ಅವರು, “ಮಹಿಳೆಯರು ವಯಸ್ಸಿನ ಮಿತಿಯನ್ನು ಲೆಕ್ಕಿಸದೆ ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಕರೆ ನೀಡಿದರು. ತಾಯಿಯ ಸಹನಶೀಲತೆ ಹಾಗೂ ಅತ್ತೆಯ ಬೆಂಬಲವಿದ್ದಾಗ ಮಾತ್ರ ಮಹಿಳೆಯರು ಹೊರಗಿನ ಜಗತ್ತಿನಲ್ಲಿ ಸಾಧನೆ ಮಾಡಲು ಸಾಧ್ಯ. ಮನೆಯವರ ಸಹಕಾರ ಸಿಕ್ಕಾಗ ಮಹಿಳೆಯರಿಗೆ ಹೆಚ್ಚಿನ ಧೈರ್ಯ ಬರುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಮಹಿಳಾ ಮಂಡಲದ ಸದಸ್ಯರು ಹಿರಿಯರ ಸಲಹೆಯೊಂದಿಗೆ ಒಗ್ಗಟ್ಟಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆಶಿಸಿದರು.

ಸಂಕ್ರಾಂತಿ ಹಬ್ಬದ ಸಾಂಪ್ರದಾಯಿಕ ಮಹತ್ವದ ಬಗ್ಗೆ ಮಾತನಾಡುತ್ತಾ, ಇದು ಕೇವಲ ರೈತರ ಹಬ್ಬವಷ್ಟೇ ಅಲ್ಲ, ಮಹಿಳೆಯರು ಸಜ್ಜೆ ರೊಟ್ಟಿ, ಸಿಹಿ ತಿನಿಸುಗಳು ಹಾಗೂ ತರಕಾರಿಗಳನ್ನು ಪರಸ್ಪರ ಹಂಚಿಕೊಂಡು ಪ್ರೀತಿ-ವಿಶ್ವಾಸ ಬೆಳೆಸಿಕೊಳ್ಳುವ ಸೌಹಾರ್ದದ ಸಂಕೇತ ಎಂದರು. ಇದೇ ಸಂದರ್ಭದಲ್ಲಿ ಪುಟ್ಟ ಮಕ್ಕಳಿಗಾಗಿ ‘ಕರಿಎರೆಯುವ’ ಶಾಸ್ತ್ರವನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ, ಮಹಿಳೆಯರಿಗಾಗಿ ಆಯೋಜಿಸಿದ್ದ ಒಡಪು ಹೇಳುವ ಸ್ಪರ್ಧೆಯು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿತು. ಕಾರ್ಯಕ್ರಮದಲ್ಲಿ ಮಂಡಲದ ಹಿರಿಯ ಹಾಗೂ ಕಿರಿಯ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಸಂಭ್ರಮಿಸಿದರು.

Tags:

error: Content is protected !!