BELAGAVI

ಬೆಳಗಾವಿಯ ವೀರಪುತ್ರ ಜಗದೀಶ್ ಶಿಂದೆ ಅಂತ್ಯಕ್ರಿಯೆ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ

Share

ದೇಶಸೇವೆಯಲ್ಲಿದ್ದಾಗಲೇ ವೀರಮರಣ ಅಪ್ಪಿದ ಬೆಳಗಾವಿ ತಾಲೂಕಿನ ಕಂಗ್ರಾಳಿ ಖುರ್ದ್ ಗ್ರಾಮದ ಯೋಧ ಜಗದೀಶ್ ಶಿಂದೆ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ನಿವೃತ್ತಿಗೆ ಕೇವಲ ಎರಡು ತಿಂಗಳು ಬಾಕಿ ಇರುವಾಗಲೇ ವಿಧಿಯಾಟಕ್ಕೆ ಬಲಿಯಾದ ಯೋಧನ ಅಗಲಿಕೆಗೆ ಇಡೀ ಜಿಲ್ಲೆಯೇ ಕಣ್ಣೀರಿಟ್ಟಿದೆ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಗದೀಶ್ ಶಿಂದೆ ಅವರು ಫೆಬ್ರವರಿ 2ರ ಸೋಮವಾರದಂದು ಹರಿಯಾಣದ ಅಂಬಾಲಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಡೆದ ಭೀಕರ ವಾಹನ ಅಪಘಾತದಲ್ಲಿ ಕಂಗ್ರಾಳಿ ಖುರ್ದ್ ಗ್ರಾಮದ ಸುಪುತ್ರ ಜಗದೀಶ್ ಶಿಂಧೆ ಅವರು ಹುತಾತ್ಮರಾಗಿದ್ದಾರೆ. ಇಂದು ಬೆಳಿಗ್ಗೆ 8-30ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಆಗಮಿಸಿತು. ಈ ವೇಳೆ ಸೇನೆಯ ವತಿಯಿಂದ ಗೌರವ ನಮನ ಸಲ್ಲಿಸಲಾಯಿತು. ನಂತರ ಅಲ್ಲಿಂದ ಮೆರವಣಿಗೆಯನ್ನು ಮಾಡಿ ಸ್ವಗ್ರಾಮ ಕಂಗ್ರಾಳಿ ಕೆ.ಎಚ್ ಗ್ರಾಮಕ್ಕೆ ತರಲಾಯಿತು. ನಂತರ ಮರಾಠಿ ಶಾಲೆಯ ಆವರಣದಲ್ಲಿ ಕೆಲ ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಈ ವೇಳೆ ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇನಾಧಿಕಾರಿಗಳು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಮಾಜಿ ಸೈನಿಕ ಸಂಘಟನೆಯವರು ಸೇರಿದಂತೆ ವಿವಿಧ ಗಣ್ಯರು ಪುಷ್ಪಚಕ್ರ ಸಮರ್ಪಿಸಿ ಅಂತಿಮ ದರ್ಶನ ಪಡೆದುಕೊಂಡರು.


ಇದಾದ ಬಳಿಕ ಗ್ರಾಮದಲ್ಲಿ ಅಂತ್ಯಯಾತ್ರೆಯನ್ನು ನಡೆಸಲಾಯಿತು. ಸೇನಾ ವರಿಷ್ಠಾಧಿಕಾರಿ ರಾವುತ್ ಅವರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಭಾರತ ಮಾತೆಯ ಸೇವೆಗೈದು ಆಕೆಯ ಮಡಿಲಲ್ಲಿ ಮಲಗಿದ ವೀರಯೋಧ ಜಗದೀಶ್ ಶಿಂಧೇ ಅವರ ಪಾರ್ಥಿವದ ಮೇಲೆ ಹೊದಿಸಿದ್ದ ಭಾರತದ ಧ್ವಜವನ್ನು ಜಗದೀಶ್ ಶಿಂಧೆ ಅವರ ಪತ್ನಿಗೆ ನೀಡಲಾಯಿತು. ಈ ವೇಳೆ ಕುಟುಂಬಸ್ಥರ ಕಣ್ಣೀರಿನ ಕಟ್ಟೆಯೊಡೆಯಿತು.

ಕಂಗ್ರಾಳಿ ಕೆ.ಎಚ್. ಗ್ರಾಮದ ಸ್ಮಶಾನಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ಹುತಾತ್ಮ ಯೋಧನ ತಂದೆ ಹಾಗೂ ಹುತಾತ್ಮ ಯೋಧನ ಮಕ್ಕಳು ಜಗದೀಶ್ ಶಿಂಧೆ ಅವರ ಪಾರ್ಥಿವಕ್ಕೆ ಮುಖಾಗ್ನಿಯನ್ನು ನೀಡಿದರು.

ಯೋಧ ಜಗದೀಶ್ ಶಿಂಧೆ ಅವರು ಕಡುಬಡತನ ಕುಟುಂಬದಿಂದ ಬಂದವರು. ಅವರ ತಂದೆ ಕೂಲಿನಾಲಿ ಮಾಡಿ ಮಕ್ಕಳಿಗೆ ಶಾಲೆಯನ್ನು ಕಲಿಸಿದ್ದರು. ಅವರ ಇಬ್ಬರೂ ಪುತ್ರರು ಸೇನೆಯಲ್ಲಿ ಭರ್ತಿಯಾಗಿದ್ದರು. 24 ವರ್ಷ ಜಗದೀಶ್ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿ 2 ತಿಂಗಳಲ್ಲೇ ನಿವೃತ್ತರಾಗಬೇಕಿತ್ತು. ಅಷ್ಟರಲ್ಲೇ ವಿಧಿಯಾಟವಾಡಿದೆ. ಅವರ ನಿಧನಕ್ಕೆ ಸಂಪೂರ್ಣ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣಗೊಂಡಿದೆ.

ಕಂಗ್ರಾಳಿ ಕೆ.ಎಚ್ ಗ್ರಾಮದ ವಾಮನ್ ಜಾಧವ್ ಎಂಬ ಯೋಧ 2023 ರಲ್ಲಿ ಹುತಾತ್ಮರಾಗಿದ್ದರು. ಇಂದು ಯೋಧ್ ಜಗದೀಶ್ ಶಿಂಧೆ ಹುತಾತ್ಮರಾಗಿದ್ದಾರೆಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಅರುಣ್ ಕೋಲಕಾರ ಹೇಳಿದರು.

ದೇಶಕ್ಕಾಗಿ ನನ್ನ ಶಾಲೆಯ ಸಹಪಾಠಿಯಾಗಿದ್ದ ಯೋಧ ಜಗದೀಶ್ ಶಿಂಧೆ ಅವರು ಬಲಿದಾನವನ್ನು ನೀಡಿದ್ದಾರೆ. ಅತ್ಯಂತ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದ ಜಗದೀಶ್ ಶಿಂಧೆ ಅವರು ವ್ಯಕ್ತಿತ್ವವನ್ನು ಇಂದು ಸೇರಿದ ಜನ ಸಮೂಹದಿಂದ ಊಹಿಸಬಹುದಾಗಿದೆ ಎಂದು ಗ್ರಾ ಪಂ ಸದಸ್ಯ ಪ್ರಶಾಂತ್ ಪಾಟೀಲ್ ಮತ್ತು ಕಿಶನ್ ಪಾಟೀಲ್ ತಿಳಿಸಿದರು.

ಹುತಾತ್ಮ ಯೋಧ ಜಗದೀಶ್ ಶಿಂಧೆ ಅವರು ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!