Vijaypura

ವಸತಿ ಶಾಲೆಯಲ್ಲಿ ಆಹಾರ ದುರಂತ – ಅಕ್ಕಿಯಲ್ಲಿ ಹುಳು ಪತ್ತೆ ಮಾಡಿ ಬಯಲಿಗೆಳೆದ ಪೋಷಕರು

Share

ವಿಜಯಪುರ ಜಿಲ್ಲೆಯಲ್ಲಿ ವಸತಿ ಶಾಲೆಗಳ ಆಹಾರ ವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಮುದ್ದೇಬಿಹಾಳ ತಾಲ್ಲೂಕಿನ ಜಮ್ಮಲದಿನ್ನಿ ಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಅಕ್ಕಿಯಲ್ಲಿ ಹುಳುಗಳು ಪತ್ತೆಯಾಗಿವೆ. ಕಳೆದ ಆರು ತಿಂಗಳಿನಿಂದ ಇದೇ ಪರಿಸ್ಥಿತಿ ಮುಂದುವರಿದಿದ್ದು, ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಇಲ್ಲಿದೆ ಒಂದು ವರದಿ…

ಹೌದು… ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಜಮ್ಮಲದಿನ್ನಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಆಹಾರ ಧಾನ್ಯಗಳಲ್ಲಿ ಹುಳು ಕಾಟ ಕಂಡುಬಂದಿದೆ. ಶಾಲೆಗೆ ಸರಬರಾಜು ಆಗಿರುವ ಅಕ್ಕಿಯಲ್ಲಿ ಹುಳುಗಳು ಕಂಡುಬಂದಿದ್ದು, ಅಡುಗೆ ಸಿಬ್ಬಂದಿ ಅಕ್ಕಿಯಿಂದ ಹುಳುಗಳನ್ನು ಬೇರ್ಪಡಿಸಲು ಪರದಾಡುತ್ತಿದ್ದಾರೆ.
ವಸತಿ ಶಾಲೆಗೆ ಹುಳು ತುಂಬಿದ ಅಕ್ಕಿಯೇ ಸಪ್ಲೈ ಆಗುತ್ತಿದೆ ಎನ್ನುವ ಆರೋಪ ಕೇಳಿಬಂದಿದ್ದು, ಅಕ್ಕಿಯಲ್ಲಿ ಹುಳು ಕಂಡ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಪೋಷಕರೊಬ್ಬರು ವಸತಿ ಶಾಲೆಗೆ ಭೇಟಿ ನೀಡಿದ ವೇಳೆ ಈ ಅಕ್ರಮ ಬಯಲಾಗಿದ್ದು, ತಕ್ಷಣವೇ ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರಶ್ನೆ ಎತ್ತಿದ್ದಾರೆ.
ವಿದ್ಯಾರ್ಥಿನಿಯರು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದು, ಕೆಲವೊಮ್ಮೆ ಹುಳುಗಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ಅನ್ನ ತಯಾರಿಸಿ ನಮಗೆ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇಂತಹ ಅನ್ನ ಸೇವಿಸಿದ ಬಳಿಕ ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಕೆಲವೊಮ್ಮೆ ಫುಡ್ ಪಾಯಿಸನಿಂಗ್‌ನಿಂದ ಮಕ್ಕಳು ಪರದಾಡಿರುವ ಘಟನೆಗಳೂ ನಡೆದಿವೆ ಎನ್ನಲಾಗಿದೆ. ಸದ್ಯವೂ ಅಡುಗೆ ಸಿಬ್ಬಂದಿ ಅಕ್ಕಿಯಲ್ಲಿರುವ ಹುಳುಗಳನ್ನು ಬೇರ್ಪಡಿಸಲು ಹರಸಾಹಸ ಪಡುತ್ತಿದ್ದು, ಈ ವಿಷಯವನ್ನು ಪೋಷಕರೇ ಬಯಲಿಗೆಳೆದಿದ್ದಾರೆ. ಮಕ್ಕಳ ಆರೋಗ್ಯದೊಂದಿಗೆ ಆಟವಾಡುವ ಈ ನಿರ್ಲಕ್ಷ್ಯದ ವಿರುದ್ಧ ಪೋಷಕರು ಮತ್ತು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು, ವಸತಿ ಶಾಲೆಯ ಮಕ್ಕಳಿಗೆ ಸುರಕ್ಷಿತ ಮತ್ತು ಗುಣಮಟ್ಟದ ಆಹಾರ ಒದಗಿಸಬೇಕೆಂಬ ಒತ್ತಾಯ ಜೋರಾಗಿದೆ.

Tags:

error: Content is protected !!