ಬೆಳಗಾವಿಯ ಸಮರ್ಥನಗರದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಲೇಔಟ್ ನಿರ್ಮಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮರಗಳನ್ನು ಕಡಿದು, ಚರಂಡಿ ಜಾಗ ಒತ್ತುವರಿ ಮಾಡಿ ರಸ್ತೆ ನಿರ್ಮಿಸಿರುವ ಭೂಮಾಫಿಯಾದ ವಿರುದ್ಧ ಸ್ಥಳೀಯ ನಿವಾಸಿಗಳು ಈಗ ಬೀದಿಗಿಳಿದು ಹೋರಾಡಲು ಸಜ್ಜಾಗಿದ್ದಾರೆ.


ಬೆಳಗಾವಿಯ ಸಮರ್ಥನಗರದ ಸರ್ವೆ ನಂಬರ್ 403/1 ಮತ್ತು 403/2 ರಲ್ಲಿ ಯಾವುದೇ ಸರ್ಕಾರಿ ಅನುಮತಿ ಪಡೆಯದೇ ಅಕ್ರಮವಾಗಿ ಲೇಔಟ್ ನಿರ್ಮಿಸಲಾಗುತ್ತಿದೆ ಎಂದು ಟೀಚರ್ಸ್ ಕಾಲೋನಿ ಮತ್ತು ಬಾಡಿವಾಲೆ ಕಾಲೋನಿಯ ನಿವಾಸಿಗಳು ದೂರಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಮನಬಂದಂತೆ ಕಡಿಯಲಾಗಿದ್ದು, ಚರಂಡಿಯ ಪಕ್ಕದಲ್ಲೇ ಅಕ್ರಮವಾಗಿ ರಸ್ತೆ ನಿರ್ಮಿಸಲಾಗಿದೆ. ಈ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಚರಂಡಿಯ ಅಗಲ ಕಿರಿದಾಗಿದ್ದು, ಮುಂಬರುವ ಮಳೆಗಾಲದಲ್ಲಿ ಚರಂಡಿ ನೀರು ಮತ್ತು ಒಳಚರಂಡಿ ತ್ಯಾಜ್ಯ ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದೆ.

ಈ ಅಕ್ರಮದ ಕುರಿತು 2025ರ ಏಪ್ರಿಲ್ನಲ್ಲೇ ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ನೀಡಿದ್ದರೂ ಸಹ, ಇದುವರೆಗೂ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಮೌನವು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ತಕ್ಷಣವೇ ಈ ಅಕ್ರಮ ಲೇಔಟ್ ನಿರ್ಮಾಣವನ್ನು ರದ್ದುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಒಂದು ವೇಳೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ನಿವಾಸಿಗಳು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.
