BELAGAVI

ಸಡಗರದ ಶೋಭಾಯಾತ್ರೆ: ಭಕ್ತಿ ಭಾವದೊಂದಿಗೆ ಮಂದಿರಕ್ಕೆ ಆಗಮಿಸಿದ ಸಿದ್ಧಿವಿನಾಯಕ!

Share

ಬೆಳಗಾವಿಯ ನ್ಯೂ ಗೂಡ್‌ಶೆಡ್ ರೋಡ್‌ನ ಶ್ರೀ ಗಣೇಶ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನೂತನ ಗಣೇಶ ಮೂರ್ತಿಯ ಭವ್ಯ ಶೋಭಾಯಾತ್ರೆಯು ಅತೀವ ಸಡಗರದಿಂದ ನೆರವೇರಿತು. ನೂರಾರು ಭಕ್ತರ ಜಯಘೋಷ ಹಾಗೂ ವಾದ್ಯವೃಂದದ ನಡುವೆ ಗಣಪತಿಯ ಆಗಮನವಾಗಿದ್ದು, ಇಡೀ ಪ್ರದೇಶದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು.

ಶ್ರೀ ಗಣೇಶ ಮಂದಿರದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಮೂರ್ತಿಯ ಆಗಮನದ ಶೋಭಾಯಾತ್ರೆಯು ರವಿವಾರ ಸಂಜೆ ಶಹಾಪುರದ ಛತ್ರಪತಿ ಶ್ರೀ ಶಿವಾಜಿ ಮಹಾರಾಜ್ ಉದ್ಯಾನವನದಿಂದ ಅದ್ಧೂರಿಯಾಗಿ ಆರಂಭಗೊಂಡಿತು. ನೂತನ ಶ್ರೀ ಗಣೇಶ ವಿಗ್ರಹ, ಕಳಸ ಹಾಗೂ ಉತ್ಸವ ಮೂರ್ತಿಗಳನ್ನು ಹೊತ್ತ ಮೆರವಣಿಗೆಯು ಪ್ರಮುಖ ರಸ್ತೆಗಳಲ್ಲಿ ಸಾಗುವಾಗ ಭಕ್ತರು ಪುಷ್ಪವೃಷ್ಟಿ ಮಾಡಿದರು. ಸುಹಾಸಿನಿಯರು ಪೂರ್ಣಕುಂಭ ಹೊತ್ತು ಸಾಗಿದ್ದು ಮೆರವಣಿಗೆಯ ಮೆರುಗು ಹೆಚ್ಚಿಸಿತ್ತು. ವಿವಿಧ ವಾದ್ಯಮೇಳಗಳ ನಾದಕ್ಕೆ ಭಕ್ತರು ಹೆಜ್ಜೆ ಹಾಕುವ ಮೂಲಕ ಮಂದಿರದ ಜೀರ್ಣೋದ್ಧಾರದ ಸಂಭ್ರಮವನ್ನು ಹಂಚಿಕೊಂಡರು.
ನ್ಯೂ ಗುಡ್‌ಶೆಡ್ ರೋಡ್‌ನ 5ನೇ ಕ್ರಾಸ್‌ನಲ್ಲಿರುವ ಮಂದಿರಕ್ಕೆ ಶ್ರೀ ಮೂರ್ತಿಯ ಆಗಮನವಾದ ಬಳಿಕ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ಈ ಮೂಲಕ ಫೆಬ್ರವರಿ 5 ಮತ್ತು 6 ರಂದು ನಡೆಯಲಿರುವ ನವಗ್ರಹ ವಾಸ್ತುಪೂಜೆ ಹಾಗೂ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆತಂತಾಯಿತು. ಈ ಕುರಿತು ಕಿರಣ್ ಜಾಧವ್ ಅವರು ಇನ್ ನ್ಯೂಸ್’ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.

ಶ್ರೀ ಗಣೇಶ ಸೇವಾ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಈ ಶೋಭಾಯಾತ್ರೆಯ ಯಶಸ್ಸಿಗೆ ಶ್ರಮಿಸಿದ್ದು, ಮೆರವಣಿಗೆಯುದ್ದಕ್ಕೂ ಶಿಸ್ತುಬದ್ಧವಾಗಿ ಪಾಲ್ಗೊಂಡ ಭಕ್ತರ ನಡೆ ಎಲ್ಲರ ಗಮನ ಸೆಳೆಯಿತು.

Tags:

error: Content is protected !!