ಖಾನಾಪುರ ತಾಲೂಕಿನ ನಂದಗಡದಲ್ಲಿ ಕ್ರೀಡಾ ಹಬ್ಬದ ವಾತಾವರಣ ಮನೆಮಾಡಿತ್ತು. ಸ್ಥಳೀಯ ಗಲ್ಲಿ ಕ್ರಿಕೆಟ್ ಸ್ಪರ್ಧೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಬಾಬು ಹತ್ತರವಾಡ ಅವರ ನೇತೃತ್ವದ ತಂಡ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದೆ.


ನಂದಗಡದಲ್ಲಿ ಆಯೋಜಿಸಲಾಗಿದ್ದ ಗಲ್ಲಿ ಕ್ರಿಕೆಟ್ ಸ್ಪರ್ಧೆಯಲ್ಲಿ ಖಾನಾಪುರ ತಾಲೂಕಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಬಾಬು ಹತ್ತರವಾಡ ಅವರ ‘ವಾಲ್ಮೀಕಿ ತಂಡ’ವು ದ್ವಿತೀಯ ಸ್ಥಾನವನ್ನು ಅಲಂಕರಿಸಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. ತಂಡದ ನಾಯಕ ಮಂಜುನಾಥ ಜನಕೆ ಹಾಗೂ ಉಪನಾಯಕ ಶ್ರೀಧರ್ ನಂದಗಡಕರ ಅವರ ಸಮರ್ಥ ನಾಯಕತ್ವದಲ್ಲಿ ಆಟಗಾರರಾದ ಪ್ರಸಾದ್ ಲೋಕೋಳ್ಳಿ, ರಮೇಶ್ ಖನಗಾಂವಿ, ಪ್ರಸನ್ನ ಲೋಕೊಳ್ಳಿ, ಕಿರಣ ತೆಗೋರ, ಸುರೇಶ್ ಖನಗಾಂವಿ, ಸಂಜು ಜಾಕನೆ ಹಾಗೂ ಅಕ್ಷಯ ರಜಪೂತ ಅವರು ಅದ್ಭುತ ಕೌಶಲ್ಯ ಪ್ರದರ್ಶಿಸುವ ಮೂಲಕ ತಂಡದ ಯಶಸ್ಸಿಗೆ ಕಾರಣರಾದರು.
ಈ ಸಂದರ್ಭದಲ್ಲಿ ವಿಜೇತ ತಂಡವನ್ನು ಅಭಿನಂದಿಸಿ ಮಾತನಾಡಿದ ಬಾಬು ಹತ್ತರವಾಡ ಅವರು, “ಇಂದಿನ ಯುವಕರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಶರೀರವನ್ನು ಸದೃಢವಾಗಿಟ್ಟುಕೊಳ್ಳಲು ಸಾಧ್ಯ. ಯುವಶಕ್ತಿಯು ದುಶ್ಚಟಗಳಿಂದ ದೂರವಿರಬೇಕು ಹಾಗೂ ಇಂತಹ ಸನ್ನಿವೇಶಗಳನ್ನು ಬಳಸಿಕೊಂಡು ಉತ್ತಮ ಯುವಪಡೆಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು,” ಎಂದು ಕರೆ ನೀಡಿದರು. ಕ್ರೀಡಾಕೂಟವು ಸ್ಥಳೀಯರ ಸಂಭ್ರಮಕ್ಕೆ ಸಾಕ್ಷಿಯಾಯಿತು.
