ಬೆಳಗಾವಿಯ ಸದಾಶಿವ ನಗರ ಇಂದು ಸಂಪೂರ್ಣ ಕೇಸರಿಮಯವಾಗಿತ್ತು. ಹಿಂದೂ ಸಮ್ಮೇಳನ ಸಮಿತಿಯ ವತಿಯಿಂದ “ಹಿಂದವ: ಸೋದರಾ ಸರ್ವೇ” ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಬೃಹತ್ ಹಿಂದೂ ಸಮಾವೇಶವು ಅತ್ಯಂತ ವೈಭವದಿಂದ ಜರುಗಿತು.
ಬೆಳಗಾವಿಯ ಸದಾಶಿವ ನಗರದಲ್ಲಿ ಇಂದು ಬೃಹತ್ ಹಿಂದೂ ಸಮಾವೇಶ ನಡೆಯಿತು. ಸಮಾವೇಶದ ಹಿನ್ನೆಲೆ ನಡೆದ ಬೃಹತ್ ಮೆರವಣಿಗೆಯೂ ನಗರದಾದ್ಯಂತ ಭವ್ಯ ಕೇಸರಿ ಅಲೆಯನ್ನು ಮೂಡಿಸಿತು.


ಬೆಳಗಾವಿ ಸದಾಶಿವ ನಗರದ ಹಿಂದೂ ಸಮ್ಮೇಳನ ಸಮಿತಿಯ ವತಿಯಿಂದ “ಹಿಂದವ: ಸೋದರಾ ಸರ್ವೇ” ಎಂಬ ಘೋಷವಾಕ್ಯದೊಂದಿಗೆ ಸದಾಶಿವ ನಗರದ ಗಾಣಿಗ ಸಮಾಜದ ಅಭಿವೃದ್ಧಿ ಸಂಘದ ಮೈದಾನದಲ್ಲಿ ಬೃಹತ್ ಹಿಂದೂ ಸಮಾವೇಶವನ್ನು ನಡೆಸಲಾಯಿತು. ಈ ಸಮಾವೇಶದ ಹಿನ್ನೆಲೆಯಲ್ಲಿ ಎರಡು ಕಡೆಯಿಂದ ಮೆರವಣಿಗೆ ನಡೆಸಲಾಯಿತು.

ಒಂದು ಮೆರವಣಿಗೆ ನೆಹರು ನಗರ ಎಪಿಎಂಸಿ ರಸ್ತೆ ಮಾರ್ಗವಾಗಿ ಸದಾಶಿವನಗರ ಗಾಣಿಗ ಸಮಾಜದ ಮೈದಾನಕ್ಕೆ ಆಗಮಿಸಿದರೇ, ಇನ್ನೊಂದು ಮೆರವಣಿಗ ಹರಿದ್ರಾ ಗಣೇಶ್ ಮಂದಿರ ಚೌಕ್’ನಿಂದ ಆರಂಭಗೊಂಡು ಗಾಣಿಗ ಸಮಾಜದ ಮೈದಾನಕ್ಕೆ ತಲುಪಿತು. ಇದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾರಂಪರಿಕ ವೇಷಭೂಷಣಗಳನ್ನು ತೊಟ್ಟು ಹಿಂದೂಭಾಂಧವರು ಭಾಗಿಯಾಗಿದ್ಧರು.
ಮುಖ್ಯ ಅತಿಥಿಗಳಾಗಿ ವಕೀಲ ಲಕ್ಷ್ಮಣ ನಾಯಕ, ಸಂಸ್ಕೃತ ಭಾರತಿಯ ಪ್ರಾಂತ ಮಂತ್ರಿ ಶ್ರೀಕಾಂತ ಕುಲಕರ್ಣಿ ಪಾಲ್ಗೊಂಡಿದ್ದರು. ರಾಷ್ಟ್ರ ಸೇವಿಕಾ ಸಮಿತಿಯ ಚಿಕ್ಕೋಡಿ ಜಿಲ್ಲಾ ಕಾರ್ಯವಾಹ ಅನುಷಾ ಕೌಶಿಕ ಅವರು ಮುಖ್ಯ ವಕ್ತಾರರಾಗಿ ಆಗಮಿಸಿದ್ದರು. ಅಂಕಲಗಿ-ಕುಂದರಗಿಯ ಶ್ರೀ ಅಡವಿ ಸಿದ್ದೇಶ್ವರ ಮಠದ ಪರಮಪೂಜ್ಯ ಶ್ರೀ ಅಮರೇಶ್ವರ ಮಹಾಸ್ವಾಮಿಗಳು ಸಮಾವೇಶದ ದಿವ್ಯ ಸಾನಿಧ್ಯ ವಹಿಸಿದ್ದರು. ಸಮಿತಿಯ ಗೌರವ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಅಧ್ಯಕ್ಷ ಮಾರುತಿ ಮಾಸೇಕರ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

