Bailahongala

ಬೈಲಹೊಂಗಲದಲ್ಲಿ ಅತಿವೇಗದ ಬೈಕ್ ಅಟ್ಟಹಾಸ: ರಸ್ತೆ ಬದಿ ನಿಂತಿದ್ದ ವೃದ್ಧನ ಮೇಲೆ ಹರಿದ ಪಲ್ಸರ್, ಓರ್ವ ಸಾವು!

Share

ಬೈಲಹೊಂಗಲ ತಾಲ್ಲೂಕಿನ ಕೆಂಗಾನೂರ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವೃದ್ಧರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಬೈಕ್ ಸವಾರನ ಅಜಾಗರೂಕತೆಯ ಚಾಲನೆಗೆ ನಯಾನಗರದ ನಿವಾಸಿ ಬಲಿಯಾಗಿದ್ದು, ಘಟನೆಯಲ್ಲಿ ಸವಾರರಿಗೂ ಗಂಭೀರ ಗಾಯಗಳಾಗಿವೆ.
ಮೃತ ಬಾಲಪ್ಪ ನಾಗಪ್ಪ ಉಳ್ಳಿಗೇರಿ (63) ಅವರು ಕೆಂಗಾನೂರ ಗ್ರಾಮದ ಹದ್ದಿಯಲ್ಲಿ ರಸ್ತೆ ಪಕ್ಕದಲ್ಲಿ ನಿಂತಿದ್ದಾಗ, ಬೈಲಹೊಂಗಲ ಕಡೆಯಿಂದ ಬಂದ ಸೋಮನಾಥ ನಡಕಟ್ಟಿ ಎಂಬಾತ ತನ್ನ ಪಲ್ಸರ್ ಬೈಕನ್ನು ಅತಿವೇಗವಾಗಿ ಚಲಾಯಿಸಿ ಅವರಿಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಬಾಲಪ್ಪ ಅವರ ತಲೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿದ್ದು, ತಕ್ಷಣ ಅವರನ್ನು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.ಇನ್ನು ಅಪಘಾತ ಪಡಿಸಿದ ಬೈಕ್ ಸವಾರ ಸೋಮನಾಥ ಹಾಗೂ ಆತನ ಹಿಂದೆ ಕುಳಿತಿದ್ದ ಮಹಾದೇವಪ್ಪ ಅವರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶೇಷವೆಂದರೆ ಅಪಘಾತಕ್ಕೆ ಕಾರಣವಾದ ಬೈಕ್‌ಗೆ ಯಾವುದೇ ನೋಂದಣಿ ಸಂಖ್ಯೆ ಇರಲಿಲ್ಲ ಎಂಬುದು ತಿಳಿದುಬಂದಿದೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

Tags:

error: Content is protected !!