ಬೆಳಗಾವಿಯ ವಾರ್ಡ್ ನಂಬರ್ 10ರಲ್ಲಿ ಸಾರ್ವಜನಿಕರ ದೀರ್ಘಕಾಲದ ಸಮಸ್ಯೆಯಾಗಿದ್ದ ಕಸದ ಬ್ಲಾಕ್ ಸ್ಪಾಟ್ ಈಗ ಸುಂದರ ಉದ್ಯಾನವನವಾಗಿ ಮಾರ್ಪಟ್ಟಿದೆ. ಸ್ಥಳೀಯ ನಗರಸೇವಕಿ ವೈಶಾಲಿ ಭಾತಕಾಂಡೆ ಅವರ ವಿಶೇಷ ಕಾಳಜಿಯಿಂದ ಕಸದ ರಾಶಿಯ ಜಾಗದಲ್ಲಿ ಕಂಗೊಳಿಸುತ್ತಿರುವ ಈ ಮಿನಿ ಪಾರ್ಕ್ ಅನ್ನು ಶಾಸಕ ಆಸೀಫ್ ಸೇಠ್ ಇಂದು ಲೋಕಾರ್ಪಣೆಗೊಳಿಸಿದರು.


ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 10ರ ಜನರು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದರಿಂದ ಬ್ಲಾಕ್ ಸ್ಪಾಟ್ ನಿರ್ಮಾಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನಗರಸೇವಕಿ ವೈಶಾಲಿ ಸಿದ್ಧಾರ್ಥ್ ಭಾತಕಾಂಡೆ ಅವರು, ಸ್ವಯಂ ಆಸಕ್ತಿಯಿಂದ ಆ ಜಾಗವನ್ನು ಸ್ವಚ್ಛಗೊಳಿಸಿ ಆಕರ್ಷಕ ಮಿನಿ ಉದ್ಯಾನವನವನ್ನಾಗಿ ಪರಿವರ್ತಿಸಿದ್ದಾರೆ. ಈ ಪಾರ್ಕ್ ಸುತ್ತಮುತ್ತಲಿನ ಪರಿಸರವನ್ನೇ ಬದಲಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಉದ್ಯಾನವನ ಲೋಕಾರ್ಪಣೆಗೊಳಿಸಿ ಮಾತನಾಡಿದ ಶಾಸಕ ಆಸೀಫ್ ಸೇಠ್ ನಗರದ ಸ್ವಚ್ಛತೆಗೆ ಪೌರ ಕಾರ್ಮಿಕರ ಜೊತೆ ಸಾರ್ವಜನಿಕರು ಕೈಜೋಡಿಸುವುದು ಅಗತ್ಯ ಎಂದು ಕರೆ ನೀಡಿದರು. ಕಸ ಮುಕ್ತ ನಗರವನ್ನಾಗಿಸಲು ಇಂತಹ ವಿನೂತನ ಪ್ರಯೋಗಗಳು ಮಾದರಿಯಾಗಿವೆ ಎಂದು ಗಣ್ಯರು ಶ್ಲಾಘಿಸಿದರು. ಬೈಟ್
ನಗರಸೇವಕಿ ವೈಶಾಲಿ ಭಾತಕಾಂಡೆ ಅವರು ಮಾತನಾಡಿ ಕಳೆದ ಹಲವಾರು ದಿನಗಳಿಂದ ಜನರು ಇಲ್ಲಿ ಕಸವನ್ನು ಎಸೆದು ಬ್ಲಾಕ್ ಸ್ಪಾಟ್ ಆಗಿ ಮಾರ್ಪಡಿಸಿದ್ದರು. ಅದನ್ನು ಈಗ ತೆರವುಗೊಳಿಸಿ, ಚಿಕ್ಕದಾದ ಉದ್ಯಾನವನವನ್ನು ಇಲ್ಲಿ ನಿರ್ಮಿಸಲಾಗಿದೆ. ಜನರು ಎಲ್ಲೆಂದರಲ್ಲಿ ಕಸವನ್ನು ಎಸೆಯದೇ, ತ್ಯಾಜ್ಯ ವಿಲೇವಾರಿ ವಾಹನಕ್ಕೆ ಮಾತ್ರ ನೀಡಿ ನಗರ ಸ್ವಚ್ಛತೆಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರಸೇವಕ ರವಿ ಸಾಳುಂಕೆ ಹಾಗೂ ಪಾಲಿಕೆ ಪರಿಸರ ಅಧಿಕಾರಿ ಹಣಮಂತ ಕಲಾದಗಿ ಸೇರಿದಂತೆ ಪಾಲಿಕೆಯ ಸಿಬ್ಬಂದಿಗಳು ಉಪಸ್ಥಿತರಿದ್ದು, ನಗರದ ಅಂದ ಹೆಚ್ಚಿಸಲು ಸಹಕರಿಸುವಂತೆ ಜನರಲ್ಲಿ ಮನವಿ ಮಾಡಿದರು.
