Bagalkot

ಜಮಖಂಡಿಯಲ್ಲಿ ಟ್ರ್ಯಾಕ್ಟರ್ ಎಂಜಿನ್ ಪಲ್ಟಿ: ಎಂಜಿನ್ ಅಡಿ ಸಿಲುಕಿದ ಚಾಲಕನ ಸ್ಥಿತಿ ಗಂಭೀರ!

Share

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಇಂದು ಭೀಕರ ಅಪಘಾತವೊಂದು ಸಂಭವಿಸಿದೆ. ಫುಟ್‌ಪಾತ್ ಕಾಮಗಾರಿಯ ಲೋಡ್ ಹೊತ್ತು ಸಾಗುತ್ತಿದ್ದ ಟ್ರ್ಯಾಕ್ಟರ್ ಎಂಜಿನ್ ಏಕಾಏಕಿ ಪಲ್ಟಿಯಾಗಿದ್ದು, ಚಾಲಕ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸದ್ಯ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಜಮಖಂಡಿ ನಗರದ ರಮಾನಿವಾಸದ ಮುಂಭಾಗವಿರುವ ಏರಿಕೆ ರಸ್ತೆಯಲ್ಲಿ ಫುಟ್‌ಪಾತ್ ಕಾಮಗಾರಿಗೆ ಸಂಬಂಧಿಸಿದ ಗೂಡ್ಸ್ ಸಾಗಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಎಂಜಿನ್ ಪಲ್ಟಿಯಾಗಿದೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಲೋಡ್ ಸಾಗಿಸುತ್ತಿದ್ದರಿಂದ, ಏರಿಕೆ ಹತ್ತುವ ವೇಳೆ ನಿಯಂತ್ರಣ ತಪ್ಪಿ ಎಂಜಿನ್ ಹಿಮ್ಮುಖವಾಗಿ ಮಗುಚಿ ಬಿದ್ದಿದೆ ಎನ್ನಲಾಗಿದೆ. ಈ ಭೀಕರ ಅಪಘಾತದಲ್ಲಿ ಚಾಲಕ ಸುನೀಲ್ ರಾಠೋಡ (30) ಎಂಜಿನ್‌ನ ಒಳಭಾಗದಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯರು ಜೆಸಿಬಿಗಳ ನೆರವಿನೊಂದಿಗೆ ಹರಸಾಹಸ ಪಟ್ಟು ಅವರನ್ನು ಹೊರತೆಗೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸುನೀಲ್ ರಾಠೋಡ ಅವರು ಬೀಳಗಿ ತಾಲೂಕಿನ ನಾಗರಾಳ ತಾಂಡಾದ ನಿವಾಸಿಯಾಗಿದ್ದು, ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಜಮಖಂಡಿ ನಗರ ಠಾಣೆಯ ಪಿಎಸ್‌ಐ ಅನಿಲ್ ಕುಂಬಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುವನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದ್ದು, ಜಮಖಂಡಿ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗುವ ಪ್ರಕ್ರಿಯೆ ನಡೆಯುತ್ತಿದೆ.

Tags:

error: Content is protected !!