ಅದೊಂದು ಹಳೆಯ ದೇವಸ್ಥಾನವಾಗಿತ್ತು. ಆದ್ರೆ ಅತಿಕ್ರಮಣ ಮಾಡುವ ಮೂಲಕ ದೇವಸ್ಥಾನ ಬಿಟ್ಟು ಕೊಡದ ಅತಿಕ್ರಮಣಕಾರರ ವಿರುದ್ಧ 35 ವರ್ಷಗಳ ಕಾಲ ನಿರಂತರ ರೋಚಕ ಹೋರಾಟದ ಮೂಲಕ ವಾಪಸ್ ಪಡೆದ ಹಿಂದೂ ಮುಖಂಡರು ಇದೀಗ ಆ ಜಾಗೆಯಲ್ಲಿ ಸುಂದರ ದೇವಸ್ಥಾನ ನಿರ್ಮಿಸಿದ್ದಾರೆ. ಇದೀಗ ಆ ದೇವಸ್ಥಾನ 8 ನೇ ವಾರ್ಷಿಕೋತ್ಸವದ ಹಾಗೂ ಭಾರತ ಹುಣ್ಣುಮೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಕುರಿತು ಇಲ್ಲಿದೆ ಒಂದು ವರದಿ…

ವಿಜಯಪುರ ನಗರದ ಪೊಲೀಸ್ ಹೆಡ್ ಕ್ವಾರ್ಟರ್ಸ್ ಬಳಿ ಇರುವ ಹಳೆಯ ಯಲ್ಲಮ್ಮದೇವಿ ದೇವಸ್ಥಾನ ಕಳೆದ 200 ವರ್ಷಗಳ ಕಾಲ ಕೆಲವರು ಅತಿಕ್ರಮಣ ಮಾಡಿಕೊಂಡಿದ್ದರು. ಅತಿಕ್ರಮಣ ಮಾಡುವ ಮೂಲಕ ಜಾಗೆಯನ್ನು ಸುತಾರಾಂ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಇವರ ನೇತೃತ್ವದಲ್ಲಿ 35 ವರ್ಷಗಳ ಕಾಲ ನಿರಂತರ ಹೋರಾಟ ಮಾಡಿದ ಮೂಲಕ ಆ ದೇವಸ್ಥಾನ ಮರಳಿ ಪಡೆದು ಜೀರ್ಣೋದ್ಧಾರ ಮಾಡುವ ಮೂಲಕ ಭವ್ಯವಾದ ದೇವಸ್ಥಾನ ನಿರ್ಮಿಸಲಾಗಿದೆ. ಅಂದಿನ ಹೋರಾಟವು ಅತಿ ರೋಚಕ ಹೋರಾಟವಾಗಿತ್ತು. ಅದೆಷ್ಟೋ ಬಾರಿ ಮನೆ ಮಠ ಬಿಟ್ಟು ಯುವಕರು ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೋರಾಡಿದ ಫಲವಾಗಿ ಒಂದು ಸುಂದರ ದೇವಾಲಯ ನಿರ್ಮಾಣ ಮಾಡುವಂತಾಯಿತು. ಆ ದೇವಸ್ಥಾನಕ್ಕೆ ಇದೀಗ 8 ನೇ ವರ್ಷದ ಸಂಭ್ರಮ. ಈ ಹಿನ್ನೆಲೆಯಲ್ಲಿ ಆ ದೇವಸ್ಥಾನದಲ್ಲಿ ಸಂಭ್ರಮ ಕಳೆಗಟ್ಟಿತ್ತು. ಸಂಭ್ರಮವೆಂದರೆ ಅಂತಿಂತಹ ಸಂಭ್ರಮವಲ್ಲಾ ರಾತ್ರಿಯಿಡಿ ತಾಯಿ ರೇಣುಕಾ ಎಲ್ಲಮ್ಮ ದೇವಿಯ ದರ್ಶನವನ್ನು ಭಕ್ತರು ಪಡೆದರು. ಈ ವೇಳೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಕ್ತರಿಗೆ ಭಕ್ತಿ ಲೋಕದಲ್ಲಿ ವಿಹರಿಸುವಂತೆ ಮಾಡಿದವು.
ದೇವಸ್ಥಾನದ 8 ನೇ ವಾರ್ಷಿಕ ಮಹೋತ್ಸವ ಹಾಗೂ ಬಡವರ ಭಾರತ ಹುಣ್ಣಿಮೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿಯಲ್ಲಿ ಫಲ ಪಂಚಾಮೃತ ಅಭಿಷೇಕ ನಡೆಸಲಾಯಿತು. ಬಳಿಕ ಅಭಿಷೇಕ, ಪೂಜಾ ಅಲಂಕಾರ, ಪಲ್ಲಕ್ಲಿ ಉತ್ಸವ ನಡೆಯಿತು. ಪಲ್ಲಕ್ಕಿ ಉತ್ಸವವು ದೇವಾಲಯದ ಸುತ್ತಮುತ್ತಲಿನ ಬಡಾವಣೆಯಲ್ಲಿ ಸಂಚರಿಸಿತು. ವಿವಿಧ ವಾದ್ಯವೃಂದದ ಜೊತೆ ಸಂಚರಿಸಿದ ಪಲ್ಲಕ್ಕಿಗೆ ಭಕ್ತರು ಕೈಮುಗಿದು ಬರಮಾಡಿಕೊಂಡರು. ತದನಂತರ ಚೌಡಕಿ ಪದ ಕರಡಿ ಮಜಲ್ ಕಾರ್ಯಕ್ರಮ ಜರುಗಿದವು. ಕರಡಿ ಮಜಲು ನೆರೆದವರ ಮನಸೆಳೆದವು. ಅದಾದ ಬಳಿಕ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸಿ ತಾಯಿ ರೇಣುಕಾ ಎಲ್ಲಮ್ಮ ದೇವಿಯ ದರ್ಶನ ಪಡೆದರು.
ಒಟ್ಟಾರೆ 35 ವರ್ಷಗಳ ಕಾಲ ನಿರಂತರ ಹೋರಾಟದ ಫಲವಾಗಿ ಮರಳಿ ಪಡೆದ ಜೀರ್ಣೋದ್ಧಾರ ಮಾಡಿ ಸುಂದರ ದೇವಸ್ಥಾನ ನಿರ್ಮಿಸಿದ್ದು ಒಂದು ಇತಿಹಾಸವೇ ಸರಿ. ಇಂತಹ ದೇವಸ್ಥಾನದಲ್ಲಿ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.
