ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ಬಿಎಸ್ಎಫ್ ತರಬೇತಿ ಶಿಬಿರದ ಸಮಾರೋಪದಲ್ಲಿ ಕನ್ನಡಿಗಿಯೊಬ್ಬಳು ಅಬ್ಬರಿಸಿದ್ದಾಳೆ. 400 ಜನ ಪುರುಷ ಮತ್ತು ಮಹಿಳಾ ಯೋಧರ ತಂಡವನ್ನು ಮುನ್ನಡೆಸುವ ಮೂಲಕ ಬೆಳಗಾವಿಯ ಪುತ್ರಿ ರೋಶನಿ ಮುಳಿಕ್ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಜನವರಿ 31 ರಂದು ನಡೆದ ಬಿಎಸ್ಎಫ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಓಲಮನಿ ಮೂಲದ ಹಾಗೂ ಪ್ರಸ್ತುತ ಕಂಗ್ರಾಳಿ ಬಿ.ಕೆ. ಗ್ರಾಮದ ನಿವಾಸಿ ಕುಮಾರಿ ರೋಶನಿ ವಸಂತ ಮುಳಿಕ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಟ್ಟು 400 ಜನ ತರಬೇತಿ ನಿರತ ಯೋಧರನ್ನೊಳಗೊಂಡ ಪಥಸಂಚಲನ ತಂಡಕ್ಕೆ ರೋಶನಿ ಅವರು ‘ಪರೇಡ್ ಕಮಾಂಡರ್’ ಆಗಿ ನೇತೃತ್ವ ವಹಿಸಿ ವೀರಾವೇಶದ ನಾಯಕತ್ವ ಪ್ರದರ್ಶಿಸಿದರು. ಗಡಿ ಭದ್ರತಾ ಪಡೆಯ ಕಠಿಣ ತರಬೇತಿಯಲ್ಲಿ ಎಲ್ಲರಿಗಿಂತ ಮಿಗಿಲಾದ ಶಿಸ್ತು ಪ್ರದರ್ಶಿಸಿದ ಇವರಿಗೆ ಸಮಾರಂಭದಲ್ಲಿ ಗಣ್ಯರು ಗೌರವ ಸಲ್ಲಿಸಿದರು.

ಈ ಸಾಹಸಮಯ ಪಥಸಂಚಲನದಲ್ಲಿ ರೋಶನಿ ಮುಳಿಕ್ ಅವರಿಗೆ ‘ಬೆಸ್ಟ್ ಪರೇಡ್ ಕಮಾಂಡರ್’ ಮತ್ತು ‘ಬೆಸ್ಟ್ ಡ್ರಿಲ್’ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಯಿತು. ನೂರಾರು ಪುರುಷ ಯೋಧರ ನಡುವೆ ಒಬ್ಬ ಮಹಿಳೆಯಾಗಿ ಅದ್ಭುತವಾಗಿ ಪಥಸಂಚಲನ ಮುನ್ನಡೆಸುವ ಮೂಲಕ ಅವರು ‘ನಾರಿ ಶಕ್ತಿ’ಯ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದ್ದಾರೆ. ಶಾಹೂನಗರದ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಸೌ ವೈಷ್ಣವಿ ವಸಂತ ಮುಳಿಕ್ ಅವರ ಪುತ್ರಿಯಾಗಿರುವ ರೋಶನಿ ಅವರ ಈ ಸಾಹಸಕ್ಕೆ ಈಗ ಗಡಿ ಜಿಲ್ಲೆ ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
