Vijaypura

ಲ್ಯಾಂಡ್ ಲಾರ್ಡಗಳೇ ಎಚ್ಚರ ಸ್ವಲ್ಪ ಯಾಮಾರಿದ್ರೂ ಕಾದಿದೆ ಧೋಖಾ; ಯಾರದ್ದೋ ಭೂಮಿ ಯಾರದ್ದೋ ನಿವೇಶನ ಇನ್ಯಾರೋ ಮಾಲೀಕರು!

Share

ಲ್ಯಾಂಡ್ ಪ್ರಾಪರ್ಟಿ ಮಾಲೀಕರೆ ಎಚ್ಚರ ಎಚ್ಚರ.. ನೀವು ಸ್ವಲ್ಪ ಯಾಮಾರಿದ್ರೂ ಸಾಕು ನಿಮ್ಮ ಮಾಲೀಕತ್ವದ ಭೂಮಿ ಮತ್ತು ನಿವೇಶನ ಮತ್ಯಾರದ್ದೋ ಪಾಲಾಗುತ್ತೆ. ಲಕ್ಷಾಂತರ ಬೆಲೆಬಾಳುವ ಸೈಟು, ಕೊಟ್ಯಂತರ ಬೆಲೆ ಬಾಳುವ ಜಮೀನು ಪಹಣಿಯಲ್ಲಿ ಇನ್ಯಾರದ್ದೋ ಹೆಸರು ಸೇರ್ಪಡೆ ಆಗುತ್ತೆ, ಅರೆ ಅದು ಹೇಗಪ್ಪ ಅಂತೀರಾ ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ಹೌದು ಈ ಪೋಟೊಗಳಲ್ಲಿ ಕಾಣಿಸುತ್ತಾ ಇರೋರು ಇವರೇನು ಸಾಮಾನ್ಯರಲ್ಲ. ಇವರು ಒಂದೆರಡು ಜನರಲ್ಲ ಬರೋಬ್ಬರಿ ಇನ್ನೂರು ಜನರಿದ್ದಾರೆ. ಇವರು ಯಾರದ್ದೋ ಜಮೀನು ತಾವು ಮಾರಾಟ ಮಾಡಿದ್ದು ಬರೋಬ್ಬರಿ ನೂರಾ ಐವತ್ತೆಂಟು ಎಕರೆ ಹದಿಮೂರು ಗುಂಟೆ ಜಮೀನು, ಹಾಗೂ ಒಂಭತ್ತು ನಿವೇಶನ. ಅದರಲ್ಲೆನಿದೆ ವಿಶೇಷ ಅಂತೀರಾ ಇವರು ಯಾರೂ ಆ ಜಮೀನುಗಳ ಮಾಲೀಕರೇ ಅಲ್ಲ. ಹೌದು ವಿಜಯಪುರ ಜಿಲ್ಲೆಯ ಆದರ್ಶ ನಗರ ಪೋಲಿಸ್ ಠಾಣೆ, ಜಲನಗರ ಪೊಲೀಸ್ ಠಾಣೆ ಸೇರಿದಂತೆ ಇಂಡಿ ಹಾಗೂ ಕೋಲ್ಹಾರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಒಟ್ಟು ಇಪ್ಪತ್ತೇಳು ಪ್ರಕರಣಗಳ ಪೈಕಿ ವಿಜಯಪುರ ಪೋಲಿಸರು ಇಪ್ಪತ್ತೈದು ಪ್ರಕರಣಗಳನ್ನ ಭೇಧಿಸಿ ಆರೋಪಿಗಳನ್ನ ಕಂಬಿಗಳ ಹಿಂದೆ ತಳ್ಳಿದ್ದಾರೆ. ನಿರ್ಗತಿಕರು, ಬಡವರು ಮತ್ತು ಏಕಾಂಗಿಯಾಗಿ ವಾಸಿಸುವವರಿಗೆ ಧನಸಹಾಯ ಮಾಡುವದಾಗಿ ನಂಬಿಸಿ ಅವರ ಆಧಾರ ಕಾರ್ಡ ಪಡೆದು ಅದರಲ್ಲಿ ಭೂಮಿಯ ಮಾಲೀಕರ ಹೆಸರನ್ನು ತಿದ್ದುಪಡಿ ಮಾಡಿ ವಂಚಿಸುತ್ತಿದ್ದ ಪ್ರಕರಣವನ್ನ ಭೇಧಿಸುವಲ್ಲಿ ಸದ್ಯ ವಿಜಯಪುರ ಜಿಲ್ಲಾ ಪೋಲಿಸರ ತಂಡ ಯಶಸ್ವಿ ಆಗಿದೆ…

ಇನ್ಯಾರದ್ದೊ ಜಮೀನನ್ನು ಮತ್ಯಾರದೋ ಹೆಸರಿಗೆ ಏರಿಸಿ ಅವರನ್ನೇ ಮೂಲ ಮಾಲೀಕರು ಎಂದು ಬಿಂಬಿಸಿ ಮಾರಾಟ ಮಾಡುತ್ತಿದ್ದ ಜಾಲದಲ್ಲಿ ಕೆಲವರು ಹಣದ ಆಸೆಗೆ ಬಿದ್ದು ನಕಲಿ ಮಾಲೀಕರಾಗಿದ್ದರೆ. ಇನ್ನೂ ಕೆಲವರು ಈ ವಂಚಕರ ಗ್ಯಾಂಗ್ ನ ಸದಸ್ಯರೇ ಆಗಿದ್ದಾರೆ. ಅಲ್ಲೊಂದು ಸೈಟ್ ಇದೆ ತಗೋಳ್ತೀರಾ ಅನ್ನುತ್ತ ಬಕ್ರಾಗಳನ್ನ ಖೆಡ್ಡಕ್ಕೆ ಕೆಡವುತ್ತಿದ್ದ ಗ್ಯಾಂಗ್ ಕಡಿಮೆ ದರದಲ್ಲಿ ಮತ್ಯಾರದ್ದೋ ಜಮೀನು ಅಥವಾ ಸೈಟನ್ನು ಮಾರಾಟ ಮಾಡಿ ವಂಚಿಸುತ್ತಿದ್ದು ಮೂಲ ಮಾಲೀಕರ ಗಮನಕ್ಕೆ ತರದೆ ವ್ಯವಹಾರ ಕುದುರಿಸುತ್ತಿದ್ದರು. ಈ ಮಾಹಿತಿ ಕಲೆ ಹಾಕಿದ ವಿಜಯಪುರ ಪೋಲಿಸರು ಸದ್ಯ ವಂಚಕರ ಜಾಲವನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದ್ದು ಜಮೀನು ಮತ್ತು ನಿವೇಶನಗಳ ಮೂಲ ಮಾಲೀಕರಿಗೆ ಅವುಗಳನ್ನು ಮರಳಿ ಕೊಡುವ ಪ್ರಕ್ರಿಯೆ ಶುರು ಮಾಡಿ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಇಷ್ಟು ದಿನಗಳಲ್ಲಿ ಕಾಲ ವಿಜಯಪುರ ಜಿಲ್ಲೆಯಲ್ಲಿ ವೈಯಕ್ತಿಕ ದ್ವೇಷಕ್ಕಾಗಿ ಕೊಲೆಗಳ ನಡೆಯುತ್ತಿದ್ದವು, ಭೀಮಾತೀರದ ರಕ್ತ ಚರಿತ್ರೆಯ ನಡುವೆ ಕ್ರೈಮ್ ರೇಟ್ ಕಡಿಮೆ ಮಾಡಲು ಶ್ರಮಿಸುತ್ತಿದ್ದ ಪೋಲಿಸರಿಗೆ
ಬ್ಯಾಂಕ್ ದರೋಡೆ, ಚಿನ್ನಾಭರಣ ಲೂಟಿ, ಇನ್ವೆಸ್ಟಮೆಂಟ್ ಹೆಸರಿನ ವಂಚನೆ ಹಾಗೂ ಮೋಟಾರು ವಾಹನಗಳ ಕಳ್ಳತನ ಮತ್ತು ಸೈಬರ್ ವಂಚನೆಯ ಪ್ರಕರಣಗಳು ತಲೆ ನೋವಾಗಿ ಪರಿಣಮಿಸುತ್ತಿದ್ದರೆ, ಸದ್ಯ ಭೂ ಕಬಳಿಕೆಯ ಆರೋಪಿಗಳು ಸವಾಲಾಗಿದ್ದು ಆರಂಭಿಕ ಹಂತದಲ್ಲಿ ಸುಮಾರು 158 ಎಕರೆಯಷ್ಟು ಭೂ ಕಬಳಿಕೆ ಪತ್ತೆ ಮಾಡುವಲ್ಲಿ ಪೋಲಿಸರು ಯಶಸ್ವಿ ಆಗಿದ್ದರೂ ಕೂಡ ಇದೇ ರೀತಿ ಮತ್ತಷ್ಟು ಖರೀದಿ ಮತ್ತು ಮಾರಾಟ ಪ್ರಕರಣಗಳು ಜಿಲ್ಲೆಯಲ್ಲಿ ಆಗಿರುವ ಸಾಧ್ಯತೆ ಇದ್ದು ಇದರಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಶಾಮೀಲಾಗಿರುವ ಸಾಧ್ಯತೆ ಇದೆ ಈ ವಿಚಾರವಾಗಿ ಸಹಿತ ತನಿಖೆ ಆಗಬೇಕಿದೆ…

ಒಟ್ಟಾರೆ ಆಗಿ ಕಳೆದ ಕೆಲದಿನಗಳ ಹಿಂದಷ್ಟೇ ವಿವಿಧ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ವಂಚನೆಗೆ ಒಳಗಾಗಿದ್ದ ಜನರಿಗೆ ಅವರ ಹಣ ಮತ್ತು ಚಿನ್ನಾಭರಣ ಮರಳಿಸುವಲ್ಲಿ ಯಶಸ್ವಿ ಆಗಿದ್ದ ಪೋಲಿಸರು ಸದ್ಯ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು ಭೂ ಕಬಳಿಕೆ ಮತ್ತು ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇನ್ನೂ ಇಂತಹ ಭೂ ಕಬಳಿಕೆ ಪ್ರಕರಣದಲ್ಲಿ ರಾಜಕಾರಣಿಗಳು ಸೇರಿದಂತೆ ಅಧಿಕಾರಿಗಳು ಸಹಿತ ಶಾಮೀಲಾಗಿದ್ದು ಈ ನಿಟ್ಟಿನಲ್ಲಿ ಸಹಿತ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳಿಗೆ ಜೈಲಿಗಟ್ಟಬೇಕಿದೆ…

Tags:

error: Content is protected !!