ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಹೊಸ ಪಡಿತರ ಚೀಟಿ ಸಿಗದೆ ಬಡವರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಈ ಗಂಭೀರ ಸಮಸ್ಯೆಯನ್ನು ಮನಗಂಡು ಉಡುಪಿಯ ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಶಿರ್ವ ಅವರು ಈಗ ರಾಜ್ಯಪಾಲರ ಮೊರೆ ಹೋಗಿದ್ದಾರೆ

ರಾಜ್ಯದಲ್ಲಿ ಕಳೆದ 3-4 ವರ್ಷಗಳಿಂದ ಹೊಸ ಪಡಿತರ ಚೀಟಿ ವಿತರಣೆ ಸ್ಥಗಿತಗೊಂಡಿರುವುದು ಬಡ ಕುಟುಂಬಗಳ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಆಹಾರಕ್ಕಾಗಿ ಮಾತ್ರವಲ್ಲದೆ, ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ಶಿಕ್ಷಣ ಹಾಗೂ ಸರ್ಕಾರದ ವಿವಿಧ ಮೂಲಭೂತ ಸೌಕರ್ಯಗಳನ್ನು ಪಡೆಯಲು ಪಡಿತರ ಚೀಟಿ ಅತ್ಯಗತ್ಯವಾಗಿದೆ. ಆದರೆ ಹೊಸ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲದ ಕಾರಣ, ಅರ್ಹ ಬಡ ಕುಟುಂಬಗಳು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಶಿರ್ವ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕರ್ನಾಟಕ ರಾಜ್ಯಪಾಲರಿಗೆ ಪತ್ರ ಬರೆದಿರುವ ಪವನ್ ಕುಮಾರ್ ಅವರು, ಕೂಡಲೇ ಮಧ್ಯಪ್ರವೇಶಿಸಿ ಬಡವರಿಗೆ ನ್ಯಾಯ ಒದಗಿಸಬೇಕೆಂದು ವಿನಂತಿಸಿದ್ದಾರೆ. ಅಲ್ಪಾವಧಿಗಾದರೂ ಬಿಪಿಎಲ್ (BPL) ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಪೋರ್ಟಲ್ ಮುಕ್ತಗೊಳಿಸಬೇಕು ಹಾಗೂ ಸ್ಥಗಿತಗೊಂಡಿರುವ ಎಪಿಎಲ್ (APL) ಕಾರ್ಡ್ ವಿತರಣೆಯನ್ನೂ ಪುನರಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯದ ಜನತೆಯ ಹಿತದೃಷ್ಟಿಯಿಂದ ಈ ಬಗ್ಗೆ ತುರ್ತು ಕ್ರಮ ಕೈಗೊಂಡು ಅರ್ಹರಿಗೆ ಸೌಲಭ್ಯ ಸಿಗುವಂತೆ ಮಾಡಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.
