ಬೆಳಗಾವಿಯ ಹೋಟೆಲ್‌ವೊಂದರಲ್ಲಿ ನಡೆದಿದ್ದ ಬಂಗಾರದ ಚೈನ್ ಕಳ್ಳತನ ಪ್ರಕರಣವನ್ನು ತಿಲಕವಾಡಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಹುಬ್ಬಳ್ಳಿ ಮೂಲದ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿಯ ದೇಶಮುಖ ರಸ್ತೆಯ ಉದಯ ಭವನ ಹೋಟೆಲ್‌ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ತಿಲಕವಾಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಹುಬ್ಬಳ್ಳಿಯ ವಿದ್ಯಾ ನಗರ ನಿವಾಸಿ ಅವಿನಾಶ ರುದ್ರಪ್ಪ ಖರಸಂಗ (39) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿತನಿಂದ ಸುಮಾರು 95,000$ ರೂ. ಮೌಲ್ಯದ 8.48 ಗ್ರಾಂ ಬಂಗಾರದ ಚೈನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಸೇರಿದಂತೆ ಒಟ್ಟು 1,03,000$ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಬಿಎನ್‌ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತಾಂತ್ರಿಕ ತಂಡದ ನೆರವಿನೊಂದಿಗೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಖಡೇಬಜಾರ್ ಉಪ-ವಿಭಾಗದ ಎಸಿಪಿ ಮಾರ್ಗದರ್ಶನದಲ್ಲಿ, ತಿಲಕವಾಡಿ ಪಿಐ ಪರಶುರಾಮ ಪೂಜೇರಿ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ವಿಶ್ವನಾಥ ಘಂಟಾಮಠ, ಪ್ರಭಾಕರ ಡೊಳ್ ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು. ಅತ್ಯಂತ ಚಾಣಾಕ್ಷತನದಿಂದ ಕಳ್ಳನನ್ನು ಸೆರೆಹಿಡಿದ ಪೊಲೀಸ್ ತಂಡದ ಕಾರ್ಯವೈಖರಿಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
