Bagalkot

ಬಾಗಲಕೋಟೆಯಲ್ಲಿ ಬೀದಿನಾಯಿಗಳ ಅಟ್ಟಹಾಸಕ್ಕೆ ಬ್ರೇಕ್: ಕೊನೆಗೂ ಎಚ್ಚೆತ್ತ ನಗರಸಭೆಯಿಂದ ಬೃಹತ್ ಕಾರ್ಯಾಚರಣೆ!

Share

ಬಾಗಲಕೋಟೆ ನಗರದಲ್ಲಿ ಬೀದಿನಾಯಿಗಳ ಕಾಟಕ್ಕೆ ಬೆಚ್ಚಿಬಿದ್ದಿದ್ದ ಜನತೆಗೆ ಈಗ ಸಮಾಧಾನದ ಸುದ್ಧಿ ಸಿಕ್ಕಿದೆ. ವರ್ಷವೊಂದರಲ್ಲೇ ಸಾವಿರಾರು ಕಡಿತದ ಪ್ರಕರಣಗಳು ವರದಿಯಾದ ಬೆನ್ನಲ್ಲೇ, ನಗರಸಭೆ ಅಧಿಕಾರಿಗಳು ನಾಯಿಗಳ ನಿಯಂತ್ರಣಕ್ಕೆ ಬೀದಿಗೆ ಇಳಿದಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರವಾಗಿ ಹೆಚ್ಚುತ್ತಿದ್ದ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಮನೆಯಿಂದ ಹೊರಬರಲು ಭಯಪಡುವಂತಾಗಿತ್ತು. ಕಳೆದ ಕೇವಲ ಒಂದು ವರ್ಷದಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 3,500 ಕ್ಕೂ ಹೆಚ್ಚು ನಾಯಿ ಕಡಿತದ ಪ್ರಕರಣಗಳು ದಾಖಲಾಗಿರುವುದು ಆತಂಕ ಮೂಡಿಸಿತ್ತು. ಈ ಗಂಭೀರ ಪರಿಸ್ಥಿತಿಯನ್ನು ಗಮನಿಸಿದ ಬಾಗಲಕೋಟೆ ನಗರಸಭೆ, ಕೊನೆಗೂ ನಿದ್ರೆಯಿಂದ ಎಚ್ಚೆತ್ತು ಬೀದಿನಾಯಿಗಳ ನಿಯಂತ್ರಣಕ್ಕೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ. ಹಳೆ ನಗರದ ತೆಂಗಿನಮಠ ಮತ್ತು ಚರಂತಿಮಠ ಬಡಾವಣೆಗಳಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಮೊದಲ ದಿನವೇ 8 ಅಪಾಯಕಾರಿ ನಾಯಿಗಳನ್ನು ಸೆರೆಹಿಡಿದಿದ್ದಾರೆ.

ಸೆರೆಹಿಡಿದ ನಾಯಿಗಳಿಗೆ ಎಬಿಸಿ ಇಂಜೆಕ್ಷನ್ ನೀಡಿ, ಸಂತಾನಹರಣ ಶಸ್ತ್ರಚಿಕಿತ್ಸೆಯ ಮೂಲಕ ಅವುಗಳ ಸಂತತಿ ನಿಯಂತ್ರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ನಾಯಿಗಳಿಗೆ ಅಗತ್ಯ ಆರೈಕೆ ನೀಡಿ, ಅವುಗಳ ಉಸ್ತುವಾರಿ ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ನಗರಸಭೆಯ ಈ ದಿಢೀರ್ ಕಾರ್ಯಾಚರಣೆಯಿಂದಾಗಿ ಬಡಾವಣೆಗಳ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದು, ನಗರದ ಎಲ್ಲಾ ವಾರ್ಡ್‌ಗಳಲ್ಲೂ ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Tags:

error: Content is protected !!