ಖಾನಾಪೂರ ತಾಲೂಕಿನ ಐತಿಹಾಸಿಕ ನಂದಗಡದ ಶ್ರೀಮಠದ ಅಭಿವೃದ್ಧಿಗೆ ಈಗ ಹೊಸ ವೇಗ ಸಿಕ್ಕಿದೆ. ಶ್ರೀಮಠದಲ್ಲಿ ಗೋಶಾಲೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವಂತೆ ಕೋರಿ ಶ್ರೀಮಠದ ಉತ್ತರಾಧಿಕಾರಿಗಳಾದ ಪೂಜ್ಯ ಶ್ರೀ ಚನ್ನವೀರ ದೇವರು ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದರು.


ನಂದಗಡದ ಶ್ರೀಮಠದ ಆವರಣದಲ್ಲಿ ಗೋಶಾಲೆ ಹಾಗೂ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ನಡೆಸಲು ಮಠದ ವತಿಯಿಂದ ಯೋಜನೆ ರೂಪಿಸಲಾಗಿದೆ. ಈ ಪ್ರಸ್ತಾವನೆಗೆ ಸರ್ಕಾರದ ಸಹಕಾರ ಕೋರಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಅವರನ್ನು ಭೇಟಿ ಮಾಡಿದ ಶ್ರೀ ಚನ್ನವೀರ ದೇವರು ಮತ್ತು ಮಠದ ಪ್ರಮುಖರು ವಿಸ್ತೃತವಾಗಿ ಚರ್ಚಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ಚನ್ನವಿರೇಶ್ವರ ಜಾತ್ರಾ ಮಹೋತ್ಸವದ ಅಧ್ಯಕ್ಷರಾದ ಮಹಾಂತೇಶ ವಾಲಿ ಸೇರಿದಂತೆ ಮೋರೇಶ್ವರ ಮುನವಳ್ಳಿ, ಪ್ರಕಾಶ್ ಗುಡಿ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಿದ ನಿಯೋಗಕ್ಕೆ, ಮಠದ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆಯನ್ನು ಮುಂದಿನ ದಿನಗಳಲ್ಲಿ ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.
