Bagalkot

ಬಾಗಲಕೋಟೆ ಬೈ-ಎಲೆಕ್ಷನ್: ಮೇಟಿ ಕುಟುಂಬದಲ್ಲಿ ಟಿಕೆಟ್ ಫೈಟ್; ಸಿಎಂ ಆಪ್ತನ ವಿರುದ್ಧ ತಿರುಗಿಬಿದ್ದ ಪುತ್ರಿ ಮಾದೇವಿ!

Share

ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ಏರುತ್ತಿದ್ದಂತೆ, ಕಾಂಗ್ರೆಸ್‌ನಲ್ಲಿ ಬಂಡಾಯದ ಬೇಗುದಿ ಶುರುವಾಗಿದೆ. ಟಿಕೆಟ್‌ಗಾಗಿ ಮೇಟಿ ಕುಟುಂಬದ ಒಳಜಗಳ ಈಗ ಬೀದಿಗೆ ಬಂದಿದ್ದು, ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದ ವಿರುದ್ಧವೇ ಮೇಟಿ ಪುತ್ರಿ ಮಾದೇವಿ ಮೇಟಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಈ ಮೂಲಕ ಉಪಚುನಾವಣೆಗೂ ಮುನ್ನವೇ ಕಾಂಗ್ರೆಸ್‌ನಲ್ಲಿ ‘ಕೈ’ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಬಾಗಲಕೋಟೆ ಬೈ-ಎಲೆಕ್ಷನ್ ಈಗ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ಎಂಬಂತಾಗಿದೆ. ದಿವಂಗತ ಎಚ್.ವೈ. ಮೇಟಿ ಅವರ ಉತ್ತರಾಧಿಕಾರಿ ಯಾರು ಎಂಬ ವಿಚಾರದಲ್ಲಿ ಕುಟುಂಬದೊಳಗೆ ತಿಕ್ಕಾಟ ಶುರುವಾಗಿದೆ. ವಿಶೇಷವೆಂದರೆ, ಸಿಎಂ ಸಿದ್ದರಾಮಯ್ಯ ಅವರ ಆಪ್ತ ಹೊರಬಸು ಶೆಟ್ಟರ್ ಅವರ ಹಸ್ತಕ್ಷೇಪದ ವಿರುದ್ಧ ಮೇಟಿ ಪುತ್ರಿ ಮಾದೇವಿ ಮೇಟಿ ಕೆಂಡಾಮಂಡಲವಾಗಿದ್ದಾರೆ. ರಾಜಕೀಯ ಲಾಭಕ್ಕಾಗಿ ವಾಸ್ತವಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿರುವ ಮಾದೇವಿ, ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

“ನಮ್ಮ ತಂದೆಗೆ ಪ್ರೀತಿಯಿಂದ ಬೆಳೆದ ನಾಲ್ಕು ಮಕ್ಕಳಿದ್ದಾರೆ, ಮೂರಲ್ಲ” ಎಂದು ಪೋಸ್ಟ್ ಮಾಡುವ ಮೂಲಕ ಮೇಟಿ ಕುಟುಂಬದ ಸದಸ್ಯರ ಸಂಖ್ಯೆಯ ಬಗ್ಗೆ ಕೇಳಿಬರುತ್ತಿರುವ ಗೊಂದಲಕ್ಕೆ ಮಾದೇವಿ ಪೂರ್ಣವಿರಾಮ ಇಟ್ಟಿದ್ದಾರೆ. “ರಾಜಕೀಯ ಲಾಭಕ್ಕಾಗಿ ಸತ್ಯವನ್ನು ವಿಕೃತಿಗೊಳಿಸಬೇಡಿ, ಸತ್ಯ ಹೇಳುವುದು ನಿಮ್ಮ ಜವಾಬ್ದಾರಿ, ಇಲ್ಲದಿದ್ದರೆ ಮೌನವಾಗಿರಿ” ಎಂದು ಹೊರಬಸು ಶೆಟ್ಟರ್ ಅವರಿಗೆ ನೇರವಾಗಿಯೇ ಟಾಂಗ್ ನೀಡಿದ್ದಾರೆ. ಮೇಟಿ ಅವರ ಕುಟುಂಬದ ಆಂತರಿಕ ವಿಚಾರದಲ್ಲಿ ಹೊರಗಿನವರ ಹಸ್ತಕ್ಷೇಪ ಇನ್ನು ನಡೆಯದು ಎಂದು ಎಚ್ಚರಿಸುವ ಮೂಲಕ ಟಿಕೆಟ್ ರೇಸ್‌ನಲ್ಲಿ ತಾವೂ ಇರುವುದನ್ನು ಪರೋಕ್ಷವಾಗಿ ಸಾರಿದ್ದಾರೆ. ಕುಟುಂಬದ ಒಳಜಗಳ ಈಗ ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Tags:

error: Content is protected !!