Accident

ಅಪರಿಚಿತ ವಾಹನ ಡಿಕ್ಕಿಯಾಗಿ ಬ್ಯಾಂಕ್ ಉದ್ಯೋಗಿ ಸಾವು; ಹಿಟ್ ಅಂಡ್ ರನ್ ಪ್ರಕರಣ ದಾಖಲು

Share

ಚಿಕ್ಕೋಡಿ-ಮೀರಜ ರಾಜ್ಯ ಹೆದ್ದಾರಿಯ ಅಂಕಲಿ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸಾವನ್ನಪ್ಪಿದ್ದಾರೆ. ಅಪಘಾತವೆಸಗಿದ ವಾಹನ ಸವಾರ ನಿಲ್ಲಿಸದೆ ಪರಾರಿಯಾಗಿದ್ದು, ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕೋಡಿ ನಿವಾಸಿಯಾದ ರಾಜು ಅಪ್ಪಾಸಾಹೇಬ ಕೇಸ್ತಿ (52) ಎಂಬುವವರೇ ಮೃತಪಟ್ಟ ದುರ್ದೈವಿ. ಇವರು ಖಾಸಗಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜನವರಿ 28ರಂದು ರಾತ್ರಿ ಸುಮಾರು 7:30ರ ವೇಳೆಗೆ ರಾಜು ಅವರು ಅಂಕಲಿ ಕಡೆಯಿಂದ ಚಿಕ್ಕೋಡಿ ಕಡೆಗೆ ತಮ್ಮ ಮೋಟಾರ್ ಸೈಕಲ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಅಂಕಲಿ ಗ್ರಾಮದ ಹದ್ದಿಯಲ್ಲಿರುವ ಫಿರದೋಷ್ ಸಿಮೆಂಟ್ ಕಾರ್ಖಾನೆಯ ಹತ್ತಿರ ಯಾವುದೋ ಒಂದು ಅಪರಿಚಿತ ವಾಹನವು ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ರಾಜು ಅವರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕೋಡಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 9:15ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಅಂಕಲಿ ಪೊಲೀಸರು ಬಿ.ಎನ್.ಎಸ್ ಹಾಗೂ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾದ ವಾಹನ ಮತ್ತು ಚಾಲಕನ ಪತ್ತೆಗಾಗಿ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:

error: Content is protected !!